ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಾಯ್ದೆ ಉಲ್ಲಂಘಿಸಿ ಬೋಧಕರ ವರ್ಗಾವಣೆ

ಪತಿ–ಪತ್ನಿ ಪ್ರಕರಣದಲ್ಲಿ ಅನ್ಯಾಯ ಆರೋಪ: ಕಾಲೇಜು ಶಿಕ್ಷಣ ಇಲಾಖೆಗೆ ದೂರು
Published 4 ಆಗಸ್ಟ್ 2023, 5:31 IST
Last Updated 4 ಆಗಸ್ಟ್ 2023, 5:31 IST
ಅಕ್ಷರ ಗಾತ್ರ

ಮೈಸೂರು: ‘ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ಪ್ರಕ್ರಿಯೆಯ ಪತಿ– ಪತ್ನಿ ಪ್ರಕರಣಗಳಲ್ಲಿ ಅನ್ಯಾಯವಾಗಿದೆ’ ಎಂದು ದೂರಿ ಇಲಾಖೆಯ ಆಯುಕ್ತರಿಗೆ ಕೆಲವು ಬೋಧಕರು ಇ ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ.

ಈಗ ಆಗಿರುವ ವರ್ಗಾವಣೆಗಳನ್ನು ರದ್ದುಪಡಿಸಿ, ಮರು ವರ್ಗಾವಣೆ ಪ್ರಕ್ರಿಯೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ‌

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಂತ್ರಣ) ನಿಯಮಗಳು–2021ರ ಪ್ರಕಾರ, ಪ್ರಾಧ್ಯಾ‌ಪಕರು, ಸಹ/ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ವರ್ಗಾವಣೆಯನ್ನು ನಡೆಸಲು ಅನುಮೋದನೆ ಪಡೆಯಲಾಗಿದೆ. ಆದರೆ, ಪತಿ–ಪತ್ನಿ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಇದರಿಂದಾಗಿ ವರ್ಗಾವಣೆಗೆ ಅರ್ಹರಾದವರಿಗೆ ಅನ್ಯಾಯವಾಗಿದೆ ಎಂಬುದು ಸದ್ಯದ ದೂರು.

‘2022ರ ಡಿ.26ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿದ್ದ ಅಂಶಗಳನ್ನು ಜುಲೈ 27ರಂದು ಹೊರಡಿಸಿದ ಸುತ್ತೋಲೆಯಲ್ಲಿ ಬದಲಿಸಲಾಗಿದೆ. ಆದರೆ, ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಿಲ್ಲ. ಸಾಕಷ್ಟು ಅಂಶಗಳನ್ನು ಇಲಾಖೆ ಬದಲಾಯಿಸಿದೆ’ ಎಂಬ ಆರೋಪವೂ ಇದೆ.

ಬದಲಾಯಿಸಿ: ‘ಪತಿ– ಪತ್ನಿ ಪ್ರಕರಣದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಯಾವುದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹಿಂದಿನ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಪ್ರಕ್ರಿಯೆಯ ವೇಳೆ, ‘ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಯಸ್ಥಳಕ್ಕಿಂತ ಕಡಿಮೆ ಅಂತರದ ಸ್ಥಳವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು’ ಎಂದು ಬದಲಿಸಿದ್ದರಿಂದ ಹಲವರು ಅವಕಾಶ ವಂಚಿತರಾಗಿದ್ದಾರೆ. ದುರುದ್ದೇಶದಿಂದ ಈ ಸುತ್ತೋಲೆ ಹೊರಡಿಸಲಾಗಿದ್ದು, ತಾಲ್ಲೂಕು ಕೇಂದ್ರಗಳಲ್ಲಿ ದೀರ್ಘ ಕಾಲದಿಂದ ಕೆಲಸ ಮಾಡುತ್ತಿರುವ ಪತಿ–ಪತ್ನಿ ನಗರ ಪ್ರದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಬೋಧಕರ ಸಂಘದವರು ಹಾಗೂ ರಾಜಕೀಯ ಪ್ರಭಾವ ಉಳ್ಳವರಿಗೆ ಮಾತ್ರ ಅನುಕೂಲ ಮಾಡಿಕೊಳ್ಳಲಾಗುತ್ತಿದೆ’ ಎಂದು ಬೋಧಕರು ಆರೋಪಿಸಿದ್ದಾರೆ.

‘ಹಲವು ವರ್ಷಗಳಿಂದ ತಾಲ್ಲೂಕು ಕೇಂದ್ರದಲ್ಲಿ ಕೆಲಸ ಮಾಡಿದ್ದರೂ ನನಗೆ ನಗರಕ್ಕೆ ವರ್ಗಾವಣೆ ಸಿಗಲಿಲ್ಲ. ಜಿಲ್ಲೆಯಾದ್ಯಂತ ಕಾಲೇಜುಗಳ ಆಯ್ಕೆಗೆ ಅವಕಾಶ ಸಿಕ್ಕಿದ್ದರೆ ನನಗೂ ವರ್ಗಾವಣೆಯಾಗುತ್ತಿತ್ತು. ಆದರೆ, ದಿಢೀರನೆ ನಿಯಮ ಬದಲಿಸಿದ್ದರಿಂದ ಕೇವಲ 6 ವರ್ಷ ಕೆಲಸ ಮಾಡಿದ್ದವರಿಗೆ ಅನುಕೂಲವಾಯಿತು. ನಮ್ಮಂತೆಯೇ ಬಹಳಷ್ಟು ಮಂದಿಗೆ  ಅನ್ಯಾಯವಾಗಿದ್ದು, ಆಯುಕ್ತರಿಗೆ ಇ–ಮೇಲ್ ಮೂಲಕ ದೂರು ಸಲ್ಲಿಸಲಾಗಿದೆ. ಪತಿ–ಪತ್ನಿ ಪ್ರಕರಣದಲ್ಲಿ ಹೊಸದಾಗಿ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂಬುದು ನಮ್ಮ ಒತ್ತಾಯ’ ಎಂದು ಬೋಧಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಯ್ದೆಗೆ ತಿದ್ದುಪಡಿ ತರುವಂತೆ ಹಿಂದಿನಂದ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ‘ಎ’ ವಲಯದವರಿಗೆ (ಬೆಂಗಳೂರಿನಂತಹ ನಗರದವರಿಗೆ) ಅನುಕೂಲವಾಗಲೆಂದೇ ಮಾಡಿದ ನಿಯಮ ಇವು. ನಗರ ಪ್ರದೇಶದಲ್ಲಿರುವವರು ಅಲ್ಲಿಯೇ ಉಳಿದುಕೊಳ್ಳಲು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವವರು ಅನಿವಾರ್ಯವಾಗಿ ಅಲ್ಲೇ ಮುಂದುವರಿಯುವಂತೆ ಮಾಡಲು ವ್ಯವಸ್ಥಿತವಾಗಿ ಸುತ್ತೋಲೆ ಹೊರಡಿಸಲಾಗಿದೆ. ಪತಿ–ಪತ್ನಿ ಪ್ರಕರಣದಲ್ಲಿ ಶೇ 3ರಷ್ಟು ವರ್ಗಾವಣೆಗೆ ಅವಕಾಶವಿದ್ದರೂ ಸಂಪೂರ್ಣವಾಗಿ ಇದುವರೆಗೂ ನಡೆಸಿಲ್ಲ’ ಎಂದು ಆರೋಪಿಸಿದರು.

‘ಎಷ್ಟೋ ತಾಲ್ಲೂಕುಗಳಲ್ಲಿ ಪ್ರಥಮ ದರ್ಜೆ ಕಾಲೇಜುಗಳೇ ಇಲ್ಲ. ‘ಎ’ ಮತ್ತು ‘ಬಿ’ ವಲಯದ ಪತಿ–ಪತ್ನಿ ಪ್ರಕರಣದವರಿಗೆ ಅನುಕೂಲ ಆಗಲೆಂದೇ ಇದುವರೆಗೂ ಇಲ್ಲದ್ದನ್ನು ಈ ಬಾರಿ ಹೇರಲಾಗಿದೆ. ‘ಎ’ ಮತ್ತು ‘ಬಿ’ ವಲಯದಲ್ಲಿರುವ ಪತ್ನಿಯಿಂದಾಗಿ ಪತಿ, ಪತಿಯಿಂದಾಗಿ ಪತ್ನಿ ಅದೇ ಸ್ಥಳದಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂಬ ದೂರುಗಳಿವೆ.

‘ವರ್ಗಾವಣೆಯ ಸಮಯದಲ್ಲಿ, ಅನೇಕ ಖಾಲಿ ಹುದ್ದೆಗಳನ್ನು ಮುಚ್ಚಿಟ್ಟು, ಬೇಕಾದವರಿಗೆ ಮಾತ್ರ ತೋರಿಸುತ್ತಿದ್ದಾರೆ’ ಎಂದೂ ದೂರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆಯುಕ್ತ ಜಿ.ಜಗದೀಶ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT