ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

ಅರಮನೆ ಆವರಣದಲ್ಲಿ ಬಾಣ– ಬಿರುಸಿನ ಚಿತ್ತಾರ * ನಗರದೆಲ್ಲೆಡೆ ಹರ್ಷದ ಹೊನಲು
Last Updated 1 ಜನವರಿ 2023, 6:04 IST
ಅಕ್ಷರ ಗಾತ್ರ

ಮೈಸೂರು: ಅರಮನೆಯ ಎದುರು ಹೊಸ ವರ್ಷಾಚರಣೆಯ ವೈಭವ ಶನಿವಾರ ಮಧ್ಯರಾತ್ರಿ ಮುಗಿಲು ಮುಟ್ಟಿತ್ತು. ಬಾಣ ಬಿರುಸಿಗಳ ಚಿತ್ತಾರವನ್ನು ಕಣ್ತುಂಬಿಕೊಂಡು ಹರ್ಷೋಲ್ಲಾಸದಲ್ಲಿ ಕುಣಿದ ಪ್ರವಾಸಿಗರು ಹಾಗೂ ಮೈಸೂರಿಗರು 2023ನೇ ವರ್ಷವನ್ನು ಬರಮಾಡಿಕೊಂಡರು. ಸ್ನೇಹಿತರನ್ನು ಬಿಗಿದಪ್ಪಿದರು.

ನಗರದಲ್ಲಿ 40ಕ್ಕೂ ಹೆಚ್ಚು ಕಡೆ ಸಂಭ್ರಮಾಚರಣೆ ನಡೆಯಿತು. ಮನೆ– ಮನೆಗಳಲ್ಲಿ ಪಟಾಕಿ ಸಿಡಿಸಿದ ಯುವ ತಲೆಮಾರು ಕುಣಿದು ಕುಪ್ಪಳಿಸಿತು. ಅವರನ್ನು ನೋಡಿದ ಹಿರಿಯರಲ್ಲೂ ಸಂತಸದ ಹೊನಲು ಹರಿಯಿತು. ಚರ್ಚ್‌ಗಳಲ್ಲಿ ‍ಪ್ರಾರ್ಥನೆ, ಸಂಭ್ರಮಾಚರಣೆ ಹಾಗೂ ಶುಭಾಶಯ ವಿನಿಮಯ ನಡೆಯಿತು.

ಅರಮನೆಯಲ್ಲಿ ನಿಗದಿಯಾಗಿದ್ದ ‘ಪೊಲೀಸ್‌ ಬ್ಯಾಂಡ್‌’ನ ಸಂಗೀತ ಕಾರ್ಯಕ್ರಮವು ಎಲ್ಲರ ಮನಸೂರೆ ಗೊಂಡಿತು. ಗೀತಾ ಚಿತ್ರದ ‘ಜೊತೆ ಜೊತೆಯಲಿ’, ‘ಜೇಮ್ಸ್ ಬಾಂಡ್’, ‘ಪೈರೆಟ್ಸ್ ಆಫ್ ದಿ ಕೆರಿಬಿಯನ್’ ಗೀತೆಗಳ ವಾದ್ಯಗೋಷ್ಠಿಗೆ
ತಲೆದೂಗಿದರು.

ಬಡಾವಣೆಗಳಲ್ಲಿ ಜನರು ಕೇಕ್‌ ತರಿಸಿ ಕತ್ತರಿಸುವ ಮೂಲಕ ಸಂಭ್ರಮಿಸಿದರೆ, ಹಾಸ್ಟೆಲ್‌ಗಳಲ್ಲಿ ‘ಮಿನಿ ಪಾರ್ಟಿ’ಗಳು ನಡೆದವು. ಕ್ಲಬ್‌ಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ ಸಂಗೀತಕ್ಕೆ ಯುವ ಪಡೆ ಹೆಜ್ಜೆಹಾಕಿತು.

ಕೇಕ್‌ಗಳಿಗೆ ಭಾರಿ ಬೇಡಿಕೆ: ನಗರದ ಬೇಕರಿಗಳಲ್ಲಿ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಜನರು ಮುಗಿಬಿದ್ದು ಹಲವು ವಿನ್ಯಾಸಗಳ ಕೇಕ್‌ಗಳನ್ನು ಖರೀದಿಸಿದರು. ‘ಅರೋಮಾ’ ಬೇಕರಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಕೇಕ್‌ ಜತೆಗೆ ತಂಪು ಪಾನೀಯ ಹಾಗೂ ಇತರೆ ತಿನಿಸು ಕೊಂಡರು.. ತಡರಾತ್ರಿಯವರೆಗೂ ಬೇಕರಿಗಳು ತೆರೆದಿದ್ದವು. ಮದ್ಯ ಮಳಿಗೆಯಲ್ಲೂ ವ್ಯಾಪಾರ ಬಿರುಸಾಗಿ ನಡೆದಿತ್ತು.

ಡಿಜೆ ನಿರ್ಬಂಧ: ಡಿ.ಜೆ ಅಬ್ಬರದ ಸಂಗೀತ ಕಾರ್ಯಕ್ರಮ ನಿರ್ಬಂಧಿಸಲಾಗಿತ್ತು. ಹೀಗಾಗಿ, ಹೋಟೆಲ್, ಕ್ಲಬ್‌ಗಳಲ್ಲಿ ಹೆಚ್ಚು ಸದ್ದು ಬರಲಿಲ್ಲ. ನಗರದ 21 ಸ್ಟಾರ್ ಹೋಟೆಲ್‌ಗಳಲ್ಲಿಯೂ ಹೊಸ ವರ್ಷಾಚರಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ‘ರ‍್ಯಾಡಿಸನ್‌ ಬ್ಲ್ಯೂ’, ಸಂದೇಶ್ ದಿ ಪ್ರಿನ್ಸ್, ಸೈಲೆಂಟ್‌ ಶೋರ್ಸ್, ರುಚಿ ಸೇರಿದಂತೆ ತಾರಾ ಹೋಟೆಲ್‌ಗಳಲ್ಲಿ ಎತ್ತರದ ಕೇಕ್‌ ತಯಾರಿಸಲಾಗಿತ್ತು.

ರಾತ್ರಿ 1 ರವರೆಗೆ ಪೊಲೀಸರು ಸಂಭ್ರಮಾಚರಣೆಗೆ ಅವಕಾಶ ಕೊಟ್ಟಿದ್ದರಿಂದ ನಗರ ರಸ್ತೆಗಳಲ್ಲಿ ಯುವಕರು ತಿರುಗಾಡಿದರು. ಬೈಕುಗಳಲ್ಲಿ ಸಂಚರಿಸುವಾಗ ಎದುರುಗೊಂಡವರಿಗೆ ‘ಹ್ಯಾಪಿ ನ್ಯೂ ಇಯರ್’ ಎಂದು ಹೇಳಿದರು.

ಪೊಲೀಸ್ ಬಂದೋಬಸ್ತ್: ಅಹಿತಕರ ಘಟನೆ ತಡೆಯಲು ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಣ್ಗಾವಲಿಡಲು 59 ಕಡೆಗಳಲ್ಲಿ ಹೊಸದಾಗಿ 275 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ರಾತ್ರಿಯಿಡೀ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಶುಭ ಕೋರುವ ನೆಪದಲ್ಲಿ ತೊಂದರೆ ನೀಡುವವರ ನಿಯಂತ್ರಣಕ್ಕೆ 18 ವಿಶೇಷ ಕಾರ್ಯಪಡೆ ತಂಡ ರಸ್ತೆಗಿಳಿದಿತ್ತು. ಮಹಿಳೆಯರ ರಕ್ಷಣೆಗೆ 6 ವಿಶೇಷ ತಂಡ ಹಾಗೂ 4 ಗರುಡಾ ವಾಹನಗಳು ಸುತ್ತಾಟ ನಡೆಸಿದವು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ನಿಗಾ ವಹಿಸಲು 5 ಸಂಚಾರಿ ಕ್ಷಿಪ್ರ ಕಾರ್ಯಪಡೆಗಳನ್ನು ಆಯಕಟ್ಟಿನ ಜಾಗದಲ್ಲಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT