ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜುಂಡಸ್ವಾಮಿಗೆ ‘ಸಂಗೀತ ವಿದ್ಯಾನಿಧಿ’ ಪ್ರದಾನ

27ನೇ ಜೆಎಸ್‌ಎಸ್‌ ಸಂಗೀತ ಸಮ್ಮೇಳನಕ್ಕೆ ಸಂಭ್ರಮದ ತೆರೆ
Last Updated 7 ಡಿಸೆಂಬರ್ 2022, 5:17 IST
ಅಕ್ಷರ ಗಾತ್ರ

ಮೈಸೂರು: ವಿದ್ವಾನ್‌ ವಿ.ನಂಜುಂಡಸ್ವಾಮಿ ಅವರಿಗೆ ‘ಜೆಎಸ್‌ಎಸ್‌ ಸಂಗೀತ ಸಭಾ ಟ್ರಸ್ಟ್‌’ 2022ನೇ ಸಾಲಿನ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು.

ಸರಸ್ವತಿಪುರಂನ ನವಜ್ಯೋತಿ ಸಭಾಂಗಣದಲ್ಲಿ 27ನೇ ಆವೃತ್ತಿಯ ‘ಜೆಎಸ್‌ಎಸ್‌ ಸಂಗೀತ ಸಮ್ಮೇಳನ’ವು ಎಂ.ಬಿ.ಹರಿಹರನ್‌ ಹಾಗೂ ಎಸ್‌.ಅಶೋಕ್‌ ತಂಡದ ‘ಯುಗಳ ಗಾಯನ’ದೊಂದಿಗೆ ತೆರೆಬಿತ್ತು. ಕಳೆದ ಐದು ದಿನದಲ್ಲಿ ನಡೆದ ವಿವಿಧ ವಿದ್ವತ್‌ಗೋಷ್ಠಿಗಳು, ಸಂಗೀತ ಕಛೇರಿಗಳ ಹೂರಣದ ಸವಿ ಎಲ್ಲರದ್ದಾಗಿತ್ತು.

ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ವಿದ್ವಾನ್ ಎಚ್‌.ಕೆ.ವೆಂಕಟರಾಮ್‌ ಮಾತನಾಡಿ, ‘ರಾಗಗಳು ದಿನಕ್ಕೊಂದು ಅನುಭವ ನೀಡುತ್ತವೆ. ಇಂದು ಹಾಡಿದ ತೋಡಿ ರಾಗ ನಾಳೆ ಬೇರೆ ಅನುಭೂತಿಯನ್ನು ಕೊಡುತ್ತದೆ. ಸಂಗತಿಗಳನ್ನು ತಿದ್ದಿಕೊಳ್ಳುವಂತೆ ಮಾಡುತ್ತದೆ. ಈ ಸೃಜನತ್ವಕ್ಕೆ ಕೊನೆ ಎಂಬುದಿಲ್ಲ. ಅದು ನಿತ್ಯ ನೂತನ ಕ್ರಿಯೆ’ ಎಂದು ಹೇಳಿದರು.

‘ಕಲಾವಿದ ಹೊಸತಿನ ಹುಡುಕಾಟದಲ್ಲಿ ಇರುತ್ತಾನೆ. ಸಮ್ಮೇಳನಗಳು, ಕಛೇರಿಗಳು ಪಾಠಶಾಲೆಗಳಂತೆ. ಆಸ್ವಾದಿಸಿದಷ್ಟೇ ಕಲಿಯುವುದು ಇರುತ್ತದೆ. ನಾವು ಎಲ್ಲಿದ್ದೇವೆ ಎಂಬುದನ್ನು ನೆನಪಿಸುತ್ತವೆ. ಸಾಧನೆಗೆ ಮೆಟ್ಟಿಲಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಮರೆವಿನ ಸಮಸ್ಯೆಯನ್ನು ಯಾವೊಬ್ಬ ಸಂಗೀತಗಾರನೂ ಎದುರಿಸಿರುವುದು ನನ್ನ ಜೀವಮಾನದಲ್ಲಿ ಕೇಳಿಲ್ಲ. ಕಲಾವಿದನ ಮನಸ್ಸು ಓಡುತ್ತಲೇ ಇರುತ್ತದೆ.ಸಂಗೀತ ಕಲಿತವರು ಸದಾ ಚಟುವಟಿಕೆಯಿಂದ ಇರುತ್ತಾರೆ. ಹೀಗಾಗಿ 90 ವರ್ಷವಾದರೂ ಜಾಗರೂಕತೆ ಹಾಗೂ ಚುರುಕಿನಿಂದ ಇರುವವನ್ನು ನೋಡಿದ್ದೇನೆ. ಅವರು ಹೊಸತಿಗೆ ತುಡಿಯುತ್ತಲೇ ಇರುತ್ತಾರೆ’ ಎಂದರು.

‘ಸಮ್ಮೇಳನಗಳನ್ನು ನಡೆಸುವುದು ಸುಲಭವಲ್ಲ. ಸಮಾನ ಮನಸ್ಕರು ಜೊತೆಯಾಗಬೇಕು. ಅಂತೆಯೇ ಶೋತೃ ವರ್ಗವೂ ಇರಬೇಕು’ ಎಂದು ಅಭಿಪ್ರಾಯಪಟ್ಟರು.

ಭಂಡ ಧೈರ್ಯ ಇರಲಿ: ‘ಸಂಗೀತ ಕಲಿಯುವವರಿಗೆ ಭಂಡ ಧೈರ್ಯ ಇರಬೇಕು. ಓದು, ಇತರೆ ಕೆಲಸಗಳ ನಡುವೆ ಸಂಗೀತದಲ್ಲಿ ತೊಡಗಿಸಿಕೊಳ್ಳುವುದು ಸುಲಭವಲ್ಲ. ಕಾರ್ಪೊರೇಟ್‌ ಕಂಪನಿಯಲ್ಲಿ ದುಡಿಯುವ ನನಗೆ, ಸಂಗೀತದಲ್ಲಿ ತೊಡಗಿಸಿಕೊಂಡಾಗ ಸಿಗುವ ಅನುಭೂತಿ ಬೇರೆಲ್ಲೂ ಸಿಗದು’ ಎಂದು ವೆಂಕಟರಾಮ್‌ ಹೇಳಿದರು.

ಸಮ್ಮೇಳನ ಅಧ್ಯಕ್ಷ ವಿದ್ವಾನ್‌ ವಿ.ನಂಜುಂಡಸ್ವಾಮಿ ಮಾತನಾಡಿದರು. ವಿದ್ವಾನ್ ಮೈಸೂರು ಎಂ.ಮಂಜುನಾಥ್‌, ಮೈಸೂರು ಎಂ.ನಾಗರಾಜ್‌, ಪ್ರೊ.ಕೆ.ರಾಮಮೂರ್ತಿ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT