ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿವಾಳಿಯತ್ತ ಸಾಗಿದ ರಾಷ್ಟ್ರೀಕೃತ ಬ್ಯಾಂಕ್‌ಗಳು’

ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪ; ‘ಅದಾನಿಗೆ ₹2 ಲಕ್ಷ ಕೋಟಿ ಸಾಲ ನೀಡಿದ ಬ್ಯಾಂಕ್‌ಗಳು’
Last Updated 6 ಫೆಬ್ರುವರಿ 2023, 5:12 IST
ಅಕ್ಷರ ಗಾತ್ರ

ತಿ.ನರಸೀಪುರ: ‘ಜನಸಾಮಾನ್ಯರಿಗೆ ₹2 ಸಾವಿರ ಸಾಲ ನೀಡಲು ಹಿಂದೇಟು ಹಾಕುವ ರಾಷ್ಟ್ರೀಕೃತ ಬ್ಯಾಂಕ್‌ಗಳು, ಮೋದಿ ಅವರ ಮರ್ಜಿಗೆ ಸಿಲುಕಿ ಅದಾನಿಗೆ ₹2 ಲಕ್ಷ ಕೋಟಿ ಸಾಲ ನೀಡಿ ದಿವಾಳಿಯತ್ತ ಸಾಗಿವೆ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ದೂರಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ನಂಜನಗೂಡು ಹಾಗೂ ನರಸೀಪುರ ಕ್ಷೇತ್ರಗಳ ಆಮ್ ಆದ್ಮಿ ಪಕ್ಷದ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತಾ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‌‘ದೇಶಕ್ಕೆ ಸ್ವಾತಂತ್ರ್ಯಕ್ಕೆ 75 ವರ್ಷಗಳಾಗಿವೆ. ಹೆಚ್ಚು ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಿರೀಕ್ಷಿತ ಅಭಿವೃದ್ಧಿ ಆಗಲಿಲ್ಲ. ಉತ್ತಮ ಹಾಗೂ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಶ್ರೀಸಾಮಾನ್ಯರಿಗೆ ಒದಗಿಸಿಲ್ಲ. ಸಮಸ್ಯೆಗಳ ನಡುವೆಯೇ ಜನರು ಬದುಕು ನಡೆಸುತ್ತಿದ್ದಾರೆ’ ಎಂದರು.

‘ಪಂಚಾಯಿತಿ ಮಟ್ಟದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವುದಾಗಿ ಹೇಳುವ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದರೂ ಶಿಕ್ಷಣಕ್ಕೆ ಆದ್ಯತೆ ನೀಡಲಿಲ್ಲ. ಸಾಮಾನ್ಯರ ನೋವು ಸಾಮಾನ್ಯರಿಗೆ ಮಾತ್ರ ಅರ್ಥವಾಗುವುದು. ದೆಹಲಿ ಸರ್ಕಾರ ಕೊಟ್ಟ ಸೌಲಭ್ಯಗಳು ರಾಜ್ಯದ ಜನರಿಗೆ ಸಿಗಬೇಕಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಸ್ಥಳೀಯ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ರಾಮನ ಹೆಸರು ಹೇಳಿ ಜನರನ್ನು ಭಾವನಾತ್ಮಕವಾಗಿ ವಂಚಿಸುತ್ತಿದ್ದಾರೆ’ ಎಂದು ದೂರಿದರು.‌

ತಿ.ನರಸೀಪುರ ಕ್ಷೇತ್ರದ ಆಕಾಂಕ್ಷಿ, ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಸೋಸಲೆ ಎಂ.ಸಿದ್ದರಾಜು ಹಾಗೂ ನಂಜನಗೂಡು ಕ್ಷೇತ್ರದ ಆಕಾಂಕ್ಷಿ ಡಾ.ಎಚ್.ಹನುಮಯ್ಯ ಪಕ್ಷಕ್ಕೆ ಸೇರ್ಪಡೆಗೊಂಡರು.

ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿದರು.

ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಮಾತನಾಡಿ, ‘ಸೋಸಲೆ ಸಿದ್ದರಾಜು ಅವರು ನಿಜವಾದ ಆಮ್ ಆದ್ಮಿ. ಅಂತಹ ವ್ಯಕ್ತಿಗೆ ಪಕ್ಷದ ಜವಾಬ್ದಾರಿ ನೀಡಿದರೆ ತಳಮಟ್ಟದಿಂದ ಸಂಘಟನೆ ಬೆಳೆಯಲಿದೆ. ಆತ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದರೆ ನಾನು ಪ್ರಚಾರಕ್ಕೆ ಬೆಂಬಲ ನೀಡುವೆ’ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಬಿ.ಟಿ.ನಾಗಣ್ಣ, ಉಪಾಧ್ಯಕ್ಷ ಚೆನ್ನಪ್ಪಗೌಡ, ಜಿಲ್ಲಾಧ್ಯಕ್ಷ ರಂಗಯ್ಯ, ನರಸಿಂಹರಾಜ ಕ್ಷೇತ್ರದ ಆಕಾಂಕ್ಷಿ ಧರ್ಮಶ್ರೀ, ಯುವ ಮುಖಂಡ ತಾಯೂರು ಸಾಗರ್ ಹಾಜರಿದ್ದರು.

***

‌ಬಡ, ಮಧ್ಯಮ ವರ್ಗದ ಜನರಿಗೆ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸಿಗಬೇಕಾದರೆ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಬೇಕು.

‘ಮುಖ್ಯಮಂತ್ರಿ’ ಚಂದ್ರು, ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ

***

ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ ನೀಡಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ಅಷ್ಟರ ಮಟ್ಟಿಗೆ ಬೊಕ್ಕಸ ಬರಿದಾಗಿದೆ.

–ಪೃಥ್ವಿ ರೆಡ್ಡಿ, ಎಎಪಿ ರಾಜ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT