ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಡಿ.ಕೋಟೆ: ಸಕಾಲಕ್ಕೆ ಸಿಗದ ಆಂಬುಲೆನ್ಸ್‌ ಸೇವೆ- ಹಸುಳೆ ಸಾವು

ಎಚ್‌.ಡಿ.ಕೋಟೆಯ ಬುಂಡನಮಾಳ ಗ್ರಾಮದಲ್ಲಿ ಘಟನೆ
Last Updated 9 ಫೆಬ್ರುವರಿ 2023, 21:29 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಡವಾಗಿ ಬಂದ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್‌ ಸೌಕರ್ಯವಿರಲಿಲ್ಲ. ಜೊತೆಗೆ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಬುಂಡನಮಾಳ ಗ್ರಾಮದ ಶೀಲಾ–ಮಹದೇವ
ಸ್ವಾಮಿ ದಂಪತಿಯ ನಾಲ್ಕು ದಿನದ ಹಸುಳೆ ಬುಧವಾರ ಸಂಜೆ ಮೃತಪಟ್ಟಿತು.

ಹಸುಳೆಯ ಆರೋಗ್ಯದಲ್ಲಿ ವ್ಯತ್ಯಾಸವಾದ್ದರಿಂದ ದಂಪತಿಯು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ‘ಸ್ಥಳಕ್ಕೆ ಬರಲು ಒಂದೂವರೆ ಗಂಟೆಯಾಗುತ್ತದೆ’ ಎಂದು ಸಿಬ್ಬಂದಿ ಹೇಳಿದ್ದರಿಂದ ಬೈಕ್‌ನಲ್ಲೇ ಸಮೀಪದ ಎನ್.ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ವೈದ್ಯರು ಇರಲಿಲ್ಲ.

‘ಎಚ್‌.ಡಿ.ಕೋಟೆಗೆ ಬೈಕ್‌ನಲ್ಲೇ ಹೋಗುವಾಗ ಮಾರ್ಗ ಮಧ್ಯೆ ಆಂಬುಲೆನ್ಸ್‌ ಬಂದರೂ ಅದರಲ್ಲಿ ಆಮ್ಲಜನಕ ಸಿಲಿಂಡರ್ ಇರಲಿಲ್ಲ. ಪ್ರಶ್ನಿಸಿದರೆ ಸ್ಪಂದಿಸಲಿಲ್ಲ. ಸೇಂಟ್ ಮೇರಿಸ್ ಆಸ್ಪತ್ರೆಗೆ ಹೋದಾಗ ಹಸುಳೆ ಮೃತಪಟ್ಟಿದೆಯೆಂದು ವೈದ್ಯರು ತಿಳಿಸಿದರು’ ಎಂದು ದಂಪತಿ ಆರೋಪಿಸಿದ್ದಾರೆ.

ವಾಪಸ್‌ ಬರುವಾಗಲೂ ಸಿಬ್ಬಂದಿ ಸರಿಯಾಗಿ ವರ್ತಿಸದ ಕಾರಣ ಬಿದರಹಳ್ಳಿ ಬಳಿ ಆಂಬುಲೆನ್ಸ್‌ ಇಳಿದ ದಂಪತಿ
ಹಸುಳೆಯನ್ನು ಬೈಕ್‌ನಲ್ಲೇ ಮನೆಗೆ ಕರೆದೊಯ್ದ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ವಿಡಿಯೊದಲ್ಲೇನಿದೆ: ‘ಸಂಜೆ 4.30ಕ್ಕೆ ಬೇಗೂರಿನ ಆಸ್ಪತ್ರೆ ಮುಚ್ಚಿತ್ತು. ಎನ್‌.ಬೇಗೂರಿನಿಂದ ಎಚ್‌.ಡಿ.ಕೋಟೆಗೆ 40 ಕಿ.ಮೀ ಆಗುತ್ತದೆ. ರಸ್ತೆಯೂ ಚೆನ್ನಾಗಿಲ್ಲ. ಆಂಬುಲೆನ್ಸ್‌ ಸಿಗಲಿಲ್ಲ. ಹಸುಳೆಗೆ ಸಿಪಿಆರ್‌ ಎಷ್ಟು ಕೊಡಲು ಸಾಧ್ಯ. ಬಿದರಹಳ್ಳಿ ಬಳಿ ಆಂಬುಲೆನ್ಸ್‌ ಸಿಕ್ಕಿದರೂ ಅದರಲ್ಲಿ ಆಮ್ಲಜನಕ ಸೌಲಭ್ಯ ಇರಲಿಲ್ಲ. ಎಷ್ಟು ಬಾರಿ ಉಸಿರು ನೀಡಿ ರಕ್ಷಿಸಿಕೊಳ್ಳಲು ಸಾಧ್ಯ’ ಎಂದು ದಂಪತಿ ಹೇಳಿರುವುದು ವಿಡಿಯೊದಲ್ಲಿದೆ. ಬೈಕ್‌ ಸವಾರ ಶಿವಲಿಂಗು ಎಂಬುವರು ವಿಡಿಯೊ ಮಾಡಿ, ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ.

‘ಆಂಬುಲೆನ್ಸ್ ತಡವಾಗಿ ಬಂದಿದೆ. ಪೋಷಕರೂ ಹಸುಳೆಯನ್ನು ಆಸ್ಪತ್ರೆಗೆ ತಡವಾಗಿ ಕರೆತಂದಿದ್ದರು. ಸಕಾಲದಲ್ಲಿ ಚಿಕಿತ್ಸೆ ದೊರೆಯದಿರುವುದೇ ಸಾವಿಗೆ ಕಾರಣವಾಗಿರಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಪ್ರತಿಕ್ರಿಯಿಸಿದರು.

ಬುಂಡನಮಾಳದ ದಂಪತಿ ಮನೆಗೆ ಭೇಟಿ ನೀಡಿದ ಅವರು, ಶಿಶು ಮರಣದ ಮಾಹಿತಿ ಪಡೆದರು. ಮಹಿಳೆ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT