ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರಿಗೆ ಮೀಸಲಾತಿ: ನಿಲುವು ಪ್ರಕಟಿಸಿ

ರಾಜಕೀಯ ಪಕ್ಷಗಳಿಗೆ ನಂಜಾವಧೂತ ಸ್ವಾಮೀಜಿ ಒತ್ತಾಯ
Last Updated 20 ಮಾರ್ಚ್ 2023, 6:18 IST
ಅಕ್ಷರ ಗಾತ್ರ

ಮೈಸೂರು: ‘ನೀವ್ಯಾರೂ ಜಾತಿಯನ್ನು ತ್ಯಜಿಸಿ ಗೆದ್ದವರಲ್ಲ. ಜಾತಿಯಿಂದಲೇ ಗೆದ್ದವರು. ಒಕ್ಕಲಿಗರು ಇಂದು ಸಮಸ್ಯೆಯಲ್ಲಿದ್ದು, ಮೀಸಲಾತಿ ಹೆಚ್ಚಿಸುವ ಘೋಷಣೆಯನ್ನು ನಿಮ್ಮ ಪಕ್ಷಗಳಿಂದ ಮಾಡಿಸಿ’ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ರಾಜಕೀಯ ಪಕ್ಷಗಳ ಪ್ರಮುಖರನ್ನು ಒತ್ತಾಯಿಸಿದರು.

ನಗರದ ನೇಗಿಲಯೋಗಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ನೇಮಕಾತಿ ಪತ್ರ ವಿತರಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಬಾಲಗಂಗಾಧರನಾಥಸ್ವಾಮಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಚುನಾವಣಾ ಸಮಯದಲ್ಲಿ ಒಕ್ಕಲಿಗರನ್ನು ಮತಕ್ಕಾಗಿ ಬಳಸಿಕೊಳ್ಳುವ ಪಕ್ಷಗಳು ಮೀಸಲಾತಿ ಎಷ್ಟು ಕೊಡುತ್ತೇವೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಸಮುದಾಯಕ್ಕೆ ಶೇ.17ರಷ್ಟು ಮೀಸಲಾತಿ ನೀಡಬೇಕು ಎಂಬುದು ನಮ್ಮ ಆಪೇಕ್ಷೆ. ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಬಿಜೆಪಿ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ನಾಗೇಂದ್ರ ಮತ್ತು ಕಾಂಗ್ರೆಸ್ ಮುಖಂಡ ಹರೀಶ್ ಗೌಡ ಅವರು ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಮಾತನಾಡಬೇಕು’ ಎಂದು ಸೂಚಿಸಿದರು.

‘ಬಿಜೆಪಿ ಸರ್ಕಾರ 2ಸಿ ಮೀಸಲಾತಿಯನ್ನು ಮೌಖಿಕವಾಗಿ ಘೋಷಿಸಿ, ಯಥಾಸ್ಥಿತಿಯಲ್ಲಿಯೇ ಉಳಿಸಿದೆ. ಜಾತಿ, ಧರ್ಮ ರಹಿತವಾಗಿ ಚಿಂತಿಸುವುದು ಒಕ್ಕಲಿಗರ ಗುಣವಾಗಿದ್ದರೂ ಇಂದಿನ ವ್ಯವಸ್ಥೆಯಲ್ಲಿ ಜಾತಿಯೇ ಪ್ರಮುಖವಾಗಿದ್ದು, ಮೀಸಲಾತಿಯು ಅಭಿವೃದ್ಧಿಗೆ ಚಾಲಕ ಶಕ್ತಿಯಾಗಿದೆ. ಹೀಗಾಗಬಾರದಿತ್ತು. ಆದರೆ, ಅದನ್ನು ಯೋಚಿಸಿ ಪ್ರಯೋಜನವಿಲ್ಲ. ನಾವು ನಮ್ಮ ಹಕ್ಕಿಗಾಗಿ ಹೋರಾಡುವ ಅನಿವಾರ್ಯತೆಯಲ್ಲಿದ್ದೇವೆ’ ಎಂದರು.

‘ರಾಜ್ಯದಲ್ಲಿ ಒಕ್ಕಲಿಗರನ್ನು ಕಡೆಗಣಿಸಿ ರಾಜಕೀಯ ಅಥವಾ ಅಭಿವೃದ್ಧಿ ನಡೆಸುವುದು ಅಸಾಧ್ಯ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಬಾರಿ ಪೆನ್ ಹಿಡಿಯುವವರು ನಮ್ಮ ಸಮುದಾಯವರೇ’ ಎಂದು ಪರೋಕ್ಷವಾಗಿ ಸಿಎಂ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಸಿಗುತ್ತದೆ ಎಂದು ಹೇಳಿದರು.

‌ಸಂಸದ ಪ್ರತಾಪ ಸಿಂಹ ಮಾತನಾಡಿ, ‘ರಾಜ್ಯದ ಆದಾಯದಲ್ಲಿ ಶೇ 60ರಷ್ಟನ್ನು ಒದಗಿಸುವ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ನಮ್ಮ ಸಮುದಾಯದವರು ಎಂಬುದೇ ಒಂದು ಹೆಮ್ಮೆ. ಬೆಂಗಳೂರಿನ ವಿಮಾನನಿಲ್ದಾಣದ ಬಳಿ ಅವರ ಪ್ರತಿಮೆಯನ್ನು ಅದ್ಭುತವಾಗಿ ನಿರ್ಮಿಸಲಾಗಿದೆ’ ಎಂದರು.

‘ವಿಧಾನಸೌಧ ನಿರ್ಮಿಸಿದ ಕೆಂಗಲ್‌ ಹನುಮಂತಯ್ಯ, ವಿಕಾಸ ಸೌಧ ಹಾಗೂ ಮೈಸೂರು-ಬೆಂಗಳೂರು ನಾಲ್ಕು ಪಥದ ರಸ್ತೆ ನಿರ್ಮಿಸಿದ ಎಸ್‌.ಎಂ.ಕೃಷ್ಣ, ಹಾಗೂ ನೀರಾವರಿ ಯೋಜನೆಗಳ ವಿಷಯದಲ್ಲಿ ಎಚ್‌.ಡಿ.ದೇವೇಗೌಡರು ಸದಾ ಶ್ಲಾಘನೀಯ. ಇವರಂತೆಯೇ ಎಲ್ಲರಿಗೂ ಸೇವೆ ಸಲ್ಲಿಸುತ್ತಾ ಸಮುದಾಯಕ್ಕೆ ಶ್ರೇಯಸ್ಸು ತರಬೇಕು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ವೈದ್ಯ ಡಾ.ಅಂಜನಪ್ಪ, ಎಸಿಪಿ ಶಾಂತಮಲ್ಲಪ್ಪ, ಪ್ರಾಧ್ಯಾಪಕ ಡಾ.ಬಿ.ಎನ್.ರವೀಶ್, ವೈದ್ಯ ಡಾ.ಸಿ.ಪಿ.ಯೋಗಣ್ಣ, ಲಯನ್ಸ್‌ ಕ್ಲಬ್ ಅಧ್ಯಕ್ಷೆ ಪ್ರತಿಮಾ ಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಎಂಜಿನಿಯರ್ ಎಂ.ಸಿ.ನಾಗೇಶ್ ಮೂರ್ತಿ, ಬಿಲ್ಡರ್ ರವಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದ ರಾಜು, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

55 ಮಂದಿ ಪದಾಧಿಕಾರಿಗಳಿಗೆ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ನೇಮಕಾತಿ ಪತ್ರ ವಿತರಿಸಿದರು. ಶಾಸಕ ಎಲ್.ನಾಗೇಂದ್ರ, ಕಾಂಗ್ರೆಸ್ ಮುಖಂಡ ಹರೀಶ್‌ಗೌಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಸಿ.ಜಿ.ಗಂಗಾಧರ್, ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಉಪಾಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ರಾಜ್ಯ ಮಹಿಳಾಧ್ಯಕ್ಷೆ ಸುಮಿತ್ರಾ ರಮೇಶ್ ಇದ್ದರು.

‘ನೀರು ನಿಲ್ಲುತ್ತಿದೆ, ಸರಿಪಡಿಸಿ’

‘ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯಲ್ಲಿ ಮೂರ್ನಾಲ್ಕು ಕಡೆ ನೀರು ಸಂಗ್ರಹವಾಗುತ್ತಿದ್ದು, ಕಳೆದ ವರ್ಷ ನನ್ನ ಕಾರು ನೀರಿನಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲಿಯೇ ಪಾರಾಗಿತ್ತು’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ರಸ್ತೆ ವಿಷಯದಲ್ಲಿ ಪ್ರತಾಪ ಸಿಂಹ ಅವರನ್ನು ಶ್ಲಾಘಿಸುತ್ತಲೇ, ‘ಉತ್ತಮ ತಂತ್ರಜ್ಞಾನವನ್ನು ಬಳಸಿ ಈ ಸಮಸ್ಯೆಯನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT