ಕುಂಬಾರಕೊಪ್ಪಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರವೇಶಾತಿ ಹೆಚ್ಚಿಸಲು ವಿಶೇಷ ನೋಂದಣಿ ಅಭಿಯಾನ ಆರಂಭಿಸುವಂತೆ ಶಾಸಕ ಕೆ.ಹರೀಶ್ ಗೌಡ ಸಲಹೆ ನೀಡಿದರು. ಕಾಲೇಜಿನಲ್ಲಿ ನಿರ್ಮಿಸಲಾದ ಎರಡು ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಏಳು ವಾರ್ಡ್‌ಗಳ ವ್ಯಾಪ್ತಿಗೆ ಒಳಪಡುವ ಕಾಲೇಜಿನಲ್ಲಿ ಕೇವಲ 65 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದು ಬೇಸರದ ಸಂಗತಿ. ಇಲ್ಲಿನ ಉಪನ್ಯಾಸಕರು– ಸಿಬ್ಬಂದಿ ಸುತ್ತಲಿನ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಈ ಕಾಲೇಜಿಗೆ ಪ್ರವೇಶಾತಿ ಪಡೆಯುವಂತೆ ಮನವೊಲಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಯನ್ನು 600ಕ್ಕೆ ಏರಿಕೆ ಮಾಡಬೇಕು ಎಂದರು. ಕಾಲೇಜಿಗೆ ಕೊಳವೆ ಬಾವಿ ಮಂಜೂರಾಗಿದೆ. ಶಾಸಕರ ಅನುದಾನದಲ್ಲಿಯೇ ರಂಗಮಂದಿರ ವಿದ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಡಿಡಿಪಿಯು ಎಂ.ಮರಿಸ್ವಾಮಿ ಪ್ರಾಂಶುಪಾಲ ಶಿವಕುಮಾರ್ ಜೊತೆಗಿದ್ದರು.