ಮೈಸೂರು: ‘ಕಾವ್ಯ ಪ್ರಿಯರನ್ನು ಒಂದೇ ವೇದಿಕೆಯಲ್ಲಿ ಬೆಸೆಯಲು ದಸರಾ ಕವಿಗೋಷ್ಠಿಯನ್ನು ‘ಪಂಚಕಾವ್ಯೋತ್ಸವ’ ಹೆಸರಿನಲ್ಲಿ ಜಗನ್ಮೋಹನ ಅರಮನೆಯಲ್ಲಿ ಅ.5ರಿಂದ 9ರ ವರೆಗೆ ಆಯೋಜಿಸಲಾಗಿದ್ದು, ಉತ್ಸವವನ್ನು ಕವಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಉದ್ಘಾಟಿಸುವರು’ ಎಂದು ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ.ಲೋಲಾಕ್ಷಿ ತಿಳಿಸಿದರು.
‘1980ರಿಂದ ಕವಿಗೋಷ್ಠಿ ಆಯೋಜಿಸಲಾಗುತ್ತಿದ್ದು, ಬೇರೆ ಬೇರೆ ವೇದಿಕೆಗಳಲ್ಲಿ ನಡೆಯುತ್ತಿದ್ದವು. 44ನೇ ಕವಿಗೋಷ್ಠಿಯು ವಿಶಿಷ್ಟವಾಗಿರಲಿದೆ. 5ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಮರ್ಶಕ ಪ್ರೊ.ಬಂಜಗೆರೆ ಜಯಪ್ರಕಾಶ, ಚಿಗುರು ಅತಿಥಿಯಾಗಿ 9ನೇ ತರಗತಿ ಓದುತ್ತಿರುವ ಗದಗದ ಪ್ರಣತಿ ಎಸ್.ಗಡಾದ ಪಾಲ್ಗೊಳ್ಳುವರು’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಪ್ರಾದೇಶಿಕ ಕವಿಗೋಷ್ಠಿಗೆ ‘ಸಮರಸ’ವೆಂದು ಹೆಸರಿಡಲಾಗಿದ್ದು, 5ರಂದೇ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಉದ್ಘಾಟಿಸುವರು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳ 33 ಕವಿಗಳು ಕವಿತೆ ವಾಚಿಸುವರು. ಅ.6ರ ‘ಸಮಾನತಾ ಕವಿಗೋಷ್ಠಿ’ ಸಂವಿಧಾನದ ಆಶಯಗಳಡಿ ರೂಪುಗೊಂಡಿದ್ದು, ದೇವು ಪತ್ತಾರ ಚಾಲನೆ ನೀಡುವರು, ಚಿಂತಕ ಶಂಕರ ದೇವನೂರು, ಪ್ರಶಾಂತ ನಾಯಕ ಪಾಲ್ಗೊಳ್ಳುವರು. ಕವಿ ಮನಸ್ಸಿದ್ದರೂ ವಾಚನಕ್ಕೆ ಅವಕಾಶ ಸಿಗದ ಪತ್ರಕರ್ತರು, ವೈದ್ಯರು, ಎಂಜಿನಿಯರ್, ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ 30 ಕವಿಗಳು ಭಾಗವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಸಂತಸ ಕವಿಗೋಷ್ಠಿ’: ‘7ರಂದು ನಡೆಯುವ ‘ಸಂತಸ ಕವಿಗೋಷ್ಠಿ’ಯನ್ನು ದಸರಾ ಉದ್ಘಾಟಕರಾದ ಪ್ರೊ.ಹಂಪ ನಾಗರಾಜಯ್ಯ ಚಾಲನೆ ನೀಡುತ್ತಿದ್ದಾರೆ. ಗೋಷ್ಠಿ ಉದ್ಘಾಟನೆಗೆ ಮೊದಲೇ ಆಯ್ಕೆ ಮಾಡಲಾಗಿತ್ತು. ಬಸವರಾಜ ಸಾದರ, ಲತಾ ರಾಜಶೇಖರ್ ಕ್ರಮವಾಗಿ ಅಧ್ಯಕ್ಷರು, ಅತಿಥಿಯಾಗಿದ್ದಾರೆ. ಕನ್ನಡ ನಾಡುನುಡಿ ಇಂದು ಮತ್ತು ಮುಂದು, ಮಹಿಳೆ; ಸಮಸ್ಯೆ ಮತ್ತು ಸವಾಲು, ಆರೋಗ್ಯ–ವೈದ್ಯ–ಖಾದ್ಯ, ಶಿಕ್ಷಣ; ಭೂತ ಮತ್ತು ಭವಿಷ್ಯ, ಡಿಜಿಟಲ್ ಯುಗದ ಪ್ರಸ್ತುತ ಹಾಗೂ ಭವಿಷ್ಯ ಕುರಿತು 11 ಕವಿಗಳು ಹಾಸ್ಯ– ಸಂಗೀತದ ಜುಗಲ್‌ಬಂದಿ ನಡೆಸುವರು’ ಎಂದು ಲೋಲಾಕ್ಷಿ ತಿಳಿಸಿದರು.
‘ಪ್ರಧಾನ ಕವಿಗೋಷ್ಠಿಯನ್ನು ‘ಸಮೃದ್ಧ’ ಎಂದು ಹೆಸರಿಸಲಾಗಿದ್ದು, ಲೇಖಕಿ ಎಚ್.ಎಲ್.ಪುಷ್ಪಾ ಉದ್ಘಾಟಿಸುವರು. ಅಬ್ದುಲ್ ರಶೀದ್, ಕವಿತಾ ರೈ ಪಾಲ್ಗೊಳ್ಳುತ್ತಿದ್ದಾರೆ. 31 ಜಿಲ್ಲೆಯ ಪ್ರಬುದ್ಧ ಕವಿಗಳು ಕವನ ವಾಚಿಸುತ್ತಿದ್ದಾರೆ’ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಉಪ ವಿಶೇಷಾಧಿಕಾರಿ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಕೃಷ್ಣ ಪಾಲ್ಗೊಂಡಿದ್ದರು.
ಇದೇ ಮೊದಲಬಾರಿ ಯೂಟ್ಯೂಬ್ ಫೇಸ್‌ಬುಕ್‌ನಲ್ಲಿ ಗೋಷ್ಠಿಯ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆಪ್ರೊ.ಎನ್.ಕೆ.ಲೋಲಾಕ್ಷಿ ಕಾರ್ಯಾಧ್ಯಕ್ಷೆ ದಸರಾ ಕವಿಗೋಷ್ಠಿ ಉಪಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.