ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ: ಕೊಡುಗೆ, ಕಾರ್ಯಕ್ರಮಗಳ ಭರಾಟೆ!

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಚಾರ, ಸಂಘಟನೆ
Last Updated 8 ನವೆಂಬರ್ 2022, 8:45 IST
ಅಕ್ಷರ ಗಾತ್ರ

ಮೈಸೂರು: ತಂಬಾಕು ಬೆಳೆಗೆ ಹೆಸರುವಾಸಿಯಾದ ಪ್ರದೇಶಗಳನ್ನು ಒಳಗೊಂಡಿರುವ ಜಿಲ್ಲೆಯ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 2023ರ ಸಾರ್ವತ್ರಿಕ ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳುಗರಿಗೆದರಿವೆ.

ಹಾಲಿ ಕ್ಷೇತ್ರವನ್ನು ಜೆಡಿಎಸ್‌ನ ಕೆ.ಮಹದೇವ್ ಪ್ರತಿನಿಧಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಖಚಿತ ಎಂಬ ಮಾತುಗಳನ್ನು ಜೆಡಿಎಸ್‌ ವರಿಷ್ಠರು ಈಗಾಗಲೇ ಪ್ರಕಟಿಸಿದ್ದಾರೆ. ಹೀಗಾಗಿ, ಅವರು ಮತ್ತೊಮ್ಮೆ ಪ್ರಜಾತಂತ್ರದ ಹಬ್ಬದಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ, ವಿಧಾನಸಭೆಯ ವಿರೋಧಪಕ್ಷದ ನಾಯಕ ಕೆ.ವೆಂಕಟೇಶ್, ಆ ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮೈಸೂರು ಮಹಾನಗರಪಾಲಿಕೆ ಸದಸ್ಯರಾಗಿದ್ದ ಪ್ರಶಾಂತ್‌ಗೌಡ ಮತ್ತು ಮಂಜುಳಾ ರಾಜ್‌ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

ಬಿಜೆಪಿಯಿಂದ ಮಾಜಿ ಸಚಿವ, ಮಾಜಿ ಶಾಸಕರೂ ಆಗಿರುವ ಸಿ.ಎಚ್.ವಿಜಯಶಂಕರ್‌ ಹೆಸರು ಮುಂಚೂಣಿಯಲ್ಲಿದೆ. ಜತೆಗೆ,ತಂಬಾಕು ಮಂಡಳಿ ಉಪಾಧ್ಯಕ್ಷಎಚ್.ಸಿ.ಬಸವರಾಜು, ಮುಖಂಡ ಜಿ.ಸಿ.ವಿಕ್ರಂ‌ ರಾಜು, ಎಬಿವಿಪಿ ಸಂಘಟನೆಯ ಮೂಲಕ ಗುರುತಿಸಿಕೊಂಡಿರುವ ಹಾಗೂ ಆ ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ವಕ್ತಾರರೂ ಆಗಿರುವ ವಸಂತ್‌ಕುಮಾರ್‌ ಕೆ., ಕೆ.ಎನ್.ಸೋಮಶೇಖರ್‌ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಕೆಆರ್‌ಎಸ್ ಪಕ್ಷದಿಂದಜೋಗನಹಳ್ಳಿ ಗುರುಮೂರ್ತಿ ಆಕಾಂಕ್ಷಿಯಾಗಿದ್ದಾರೆ.

ಸೀರೆ... ಸೀಮಂತ... ಕಣ್ಣೀರು...

ಕೆ.ವೆಂಕಟೇಶ್ ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದಾರೆ. ಹಾಲಿ ಶಾಸಕ ಕೆ.ಮಹದೇವ್ ಎರಡು ಬಾರಿ ಸೋತು ಮೂರನೇ ಬಾರಿಗೆ ಗೆದ್ದವರು. ಶಾಸಕರು,ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ, ಕ್ಷೇತ್ರದ ಅಲ್ಲಲ್ಲಿ ಸೀಮಂತ ಕಾರ್ಯಕ್ರಮಗಳನ್ನು ನಡೆಸಿ, ಸೀರೆಗಳನ್ನು ಹಂಚಿ ಮಹಿಳಾ ಮತದಾರರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ವಿವಿಧ ಕೊಡುಗೆಗಳ ಭರಾಟೆ, ಕ್ರೀಡಾಕೂಟ, ಕಾರ್ಯಕ್ರಮ ಆಯೋಜನೆ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಗಳ ಮೂಲಕ ಚುನಾವಣಾ ಕಣದಲ್ಲಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಶಾಸಕರಿಗೆ ಪುತ್ರ ಕೂಡ ಸಾಥ್ ನೀಡಿದ್ದಾರೆ.

ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಕಾರ್ಯವು ಹಿಂದಿಗಿಂತಲೂ ಈಗ ಹೆಚ್ಚಾಗಿ ಕಂಡುಬರುತ್ತಿದೆ. ಯಾರಾದರೂ ನಿಧನರಾದರೆ ಅಲ್ಲಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವುದು, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುವುದು ನಡೆಯುತ್ತಿದೆ.

ಕಾಂಗ್ರೆಸ್‌ನ ವೆಂಕಟೇಶ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಕ್ರಿಕೆಟ್, ಕಬಡ್ಡಿ ಮೊದಲಾದ ಟೂರ್ನಿಗಳನ್ನು ಆಯೋಜಿಸಿ, ಎತ್ತಿನ‌ ಗಾಡಿ ಸ್ಪರ್ಧೆಗೆ ಆರ್ಥಿಕ ನೆರವು ಕೊಟ್ಟು ಯುವಜನರು ಹಾಗೂ ರೈತರ ಮನಗೆಲ್ಲಲು ಕಸರತ್ತು ನಡೆಸಿದ್ದಾರೆ. ಪ್ರಮುಖ ಪಕ್ಷಗಳಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಲೇ ಇವೆ.

ಜನರ ಅನುಕಂಪ ಗಿಟ್ಟಿಸಲು ಭಾಷಣದ ವೇಳೆ ಕಣ್ಣೀರು ಹಾಕುವುದು, ಭಾವುಕರಾಗುವುದೂ ನಡೆಯುತ್ತಿದೆ!

ಘಟಾನುಘಟಿಗಳ ಹಣಾಹಣಿ

ಆಕಾಂಕ್ಷಿಗಳು ಟಿಕೆಟ್‌ ಫೈಟ್‌ನಲ್ಲಿ ಗೆಲ್ಲಲು ವರಿಷ್ಠರ ಹಂತದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಪ್ರಬಲ ಅಭ್ಯರ್ಥಿಗೆ ಆ ಪಕ್ಷದವರು ಮಣೆ ಹಾಕುವ ನಿರೀಕ್ಷೆ ಇದೆ. ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಸಂಚಾರದಲ್ಲಿ ತೊಡಗಿದ್ದಾರೆ. ಕೆಲವರು ಬಹಿರಂಗವಾಗಿಯೇ ಫೀಲ್ಡಿಗಿಳಿದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ಅಂತಿಮಗೊಳ್ಳಬಹುದು ಎನ್ನುವ ಲೆಕ್ಕಾಚಾರವೂ ಕ್ಷೇತ್ರದಲ್ಲಿ ನಡೆಯುತ್ತಿದೆ. ಘಟಾನುಘಟಿಗಳ ಸ್ಪರ್ಧೆಯಿಂದ ಕಣವು ರಂಗೇರುವ ಸಾಧ್ಯತೆ ಇದೆ. ಹೊರಗಿನವರಿಗೆ ಮಣೆ ಹಾಕುವ ಬದಲಿಗೆ ಸ್ಥಳೀಯರಿಗೆ ಅವಕಾಶ ಕೊಡಬೇಕು ಎನ್ನುವ ಒತ್ತಾಯವು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಸ್ಪರ್ಧಾಕಾಂಕ್ಷಿಗಳುಮತ ಬೇಟೆಗೆ, ವಿವಿಧ ಸಮಾಜದ ಮುಖಂಡರ ಮನವೊಲಿಕೆಗೆ ಪ್ರಯತ್ನಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಪಕ್ಷ ಸೇರ್ಪಡೆ, ಸಂಘಟನೆ ಬಲಪಡಿಸುವುದು ಮೊದಲಾದವುಗಳಲ್ಲೂ ತೊಡಗಿದ್ದಾರೆ. ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT