ಮೈಸೂರು: ಪೋಕ್ಸೊ ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ ಬಳಿಕ ಐದೇ ದಿನದಲ್ಲಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸುವ ಮೂಲಕ ಇಲ್ಲಿನ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ) ಅತೀ ಕಡಿಮೆ ಅವಧಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿದೆ.
ಬಾಲಕಿಯೊಡನೆ ದೈಹಿಕ ಸಂಪರ್ಕ ಮಾಡಿ ಅತ್ಯಾಚಾರ ಮಾಡಿರುವ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಸೂಕ್ತ ಸಾಕ್ಷ್ಯಾಧಾರವಿಲ್ಲವೆಂದು ಆರೋಪಿಯನ್ನು ಖುಲಾಸೆಗೊಳಿಸಿದೆ.
ಜಾರ್ಖಂಡ್ ರಾಜ್ಯದ ಗಮರಿಯಾ ಗ್ರಾಮದ ನಿವಾಸಿ ‘ಕ್ರಾಂತಿ ಸಿಂಕು’ ಖುಲಾಸೆಗೊಂಡ ಆರೋಪಿ.
17 ವರ್ಷದ ಬಾಲಕಿಯನ್ನು ಮದುವೆಯಾಗಿ, ಮೈಸೂರಿನ ಕೂರ್ಗಳ್ಳಿಯ ಮನೆಯೊಂದರಲ್ಲಿ ಇರಿಸಿ ದೈಹಿಕ ಸಂಪರ್ಕ ನಡೆಸಿದ್ದ ಕುರಿತು ಬಾಲಕಿಯ ಹೇಳಿಕೆ ಆಧರಿಸಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ ಬಳಿಕ, ಆಗಸ್ಟ್ 1 ರಂದು ವಿಚಾರಣೆ ಪ್ರಾರಂಭವಾಯಿತು. ನ್ಯಾಯಾಧೀಶೆ ಶಾಹಿಮಾ ಕಮರೋಜ್ ಅವರು ಆ.5ರಂದು ತೀರ್ಪು ಪ್ರಕಟಿಸಿ, ‘ಆರೋಪಿಯ ವಿರುದ್ಧದ ಆಪಾದನೆ ಸಾಬೀತುಪಡಿಸುವ ಸಾಕ್ಷ್ಯಾಧಾರವಿಲ್ಲದ್ದರಿಂದ ಆರೋಪಿ ದೋಷ ಮುಕ್ತನಾಗಿದ್ದಾನೆ’ ಎಂದು ತೀರ್ಪು ನೀಡಿದರು. ಪ್ರಧಾನ ಕಾನೂನು ಸೇವಾ ಅಭಿರಕ್ಷಕ ಮಾಚಂಗಡ ಎಸ್.ನವೀನ್ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.