ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಲಜಾ ವಿರುದ್ಧ ಹರಿಹಾಯ್ದ ಪ್ರತಾಪ

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪನೆ ಕುರಿತ ಸಭೆ
Last Updated 14 ಫೆಬ್ರುವರಿ 2023, 14:10 IST
ಅಕ್ಷರ ಗಾತ್ರ

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಮಾನಸಗಂಗೋತ್ರಿಯ ಜಯಲಕ್ಷ್ಮೀವಿಲಾಸ ಅರಮನೆ ಕಟ್ಟಡ ಹಸ್ತಾಂತರ ವಿಷಯದಲ್ಲಿ ಸಂಸದ ಪ್ರತಾಪ ಸಿಂಹ ಕುಲಸಚಿವೆ ವಿ.ಆರ್.ಶೈಲಜಾ ವಿರುದ್ಧ ಮಂಗಳವಾರ ಹರಿಹಾಯ್ದರು.

ಕ್ರಾಫರ್ಡ್‌ ಹಾಲ್‌ನಲ್ಲಿ ನಡೆದ ಸಭೆಯಲ್ಲಿ, ‘ಜಯಲಕ್ಷ್ಮೀವಿಲಾಸ ಅರಮನೆ ಹಸ್ತಾಂತರಕ್ಕೆ ಮುನ್ನ ಕಾನೂನು ಅಭಿಪ್ರಾಯ ಪಡೆಯಬೇಕು’ ಎಂದು ಕುಲಸಚಿವೆ ಹೇಳಿದ್ದಕ್ಕೆ ಸಂಸದರು ಕುಪಿತರಾದರು.

‘ಸಿಂಡಿಕೇಟ್ ಸಭೆಗೂ ಮುನ್ನ ಕಾನೂನು ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು. ಆದರೆ, ನೇರವಾಗಿ ವಿಷಯ ತರಲಾಗಿದೆ. ಹಾಗಾಗಿ, ಕಾನೂನು ತಜ್ಞರ ವರದಿ ಪಡೆಯಬೇಕು’ ಎಂಬ ಶೈಲಜಾ ಮಾತಿಗೆ ಸಂಸದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಸರ್ಕಾರವೇ ಅನುಮತಿ ಕೊಟ್ಟಿರುವಾಗ ಮತ್ತ್ಯಾರು ಕೊಡಬೇಕು’ ಎಂದು ಕಿಡಿಕಾರಿದರು.

ಕನ್ನಡದ ಕೆಲಸವಿದು:

‘ಜಯಲಕ್ಷ್ಮಿ ವಿಲಾಸ ಅರಮನೆ ಮಹಾರಾಜರು ಮೈಸೂರು ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಭಿಕ್ಷೆ. ಯಾರ ಮನೆಯ ಆಸ್ತಿಯನ್ನೂ ಕೇಳುತ್ತಿಲ್ಲ. ಕನ್ನಡದ ಕೆಲಸವಿದು. ಕೆಎಎಸ್ ಅಧಿಕಾರಿ ಅಡ್ವೊಕೇಟ್ ಜನರಲ್ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ’ ಎಂದರು.

‘ಕಾನೂನು ಅಭಿಪ್ರಾಯ ಪಡೆಯಬೇಕಾದ್ದು ಯಾರ ಜವಾಬ್ದಾರಿ, ಅದನ್ನು ನಾನೇ ಹೇಳಿಕೊಡಬೇಕಾ? ಐಎಎಸ್ ಅಧಿಕಾರಿಗಳ ಬಳಿ ಸಹಿ ಮಾಡಿಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು’ ಎಂದು ಗುಡುಗಿದರು.

‘ನಾನೊಬ್ಬ ಕನ್ನಡದ ಬರಹಗಾರ. ಕನ್ನಡದ ಕೆಲಸಕ್ಕಾಗಿ ಶ್ರಮಿಸುತ್ತಿರುವೆ. ಉಮಾಶ್ರೀ ಸಚಿವರಾಗಿದ್ದಾಗ ಕೇಂದ್ರವನ್ನು ಬೆಂಗಳೂರಿಗೆ ಹಸ್ತಾಂತರಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾದ್ದರಿಂದ ಕೈಬಿಡಲಾಯಿತು. ಸಿ.ಟಿ.ರವಿ ಸಚಿವರಾಗಿದ್ದಾಗ ಮತ್ತೆ ಉಳಿಸಿ ಅನುದಾನ ಕೊಡಿಸಿರುವೆ. ಈಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ಕುಮಾರ್ ಮುತುವರ್ಜಿ ವಹಿಸಿದ್ದಾರೆ. ಹೀಗಿರುವಾಗ ವಿಳಂಬ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ, ಸಿಂಡಿಕೇಟ್ ಸದಸ್ಯರು ಇದ್ದರು.

ತರಲೆ ಮಾಡುತ್ತಿದ್ದಾರೆ

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರತಾಪ, ‘ಜಯಲಕ್ಷ್ಮೀವಿಲಾಸ ಅರಮನೆ ಕಟ್ಟಡ ಹಸ್ತಾಂತರಿಸುವಂತೆ ಎಂಟು ತಿಂಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಸಿಂಡಿಕೇಟ್ ಸಭೆಯಲ್ಲೂ ಅನುಮೋದನೆ ಸಿಕ್ಕದೆ. ಹೀಗಿದ್ದರೂ ಕುಲಸಚಿವೆ ಇಲ್ಲದ ತರಲೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಆ ಅರಮನೆ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕೇಂದ್ರಕ್ಕೆ ಮುಖ್ಯಮಂತ್ರಿ ₹ 27.50 ಕೋಟಿ ಅನುದಾನ ಕೊಟ್ಟಿದ್ದಾರೆ. ನವೀಕರಣ ಮಾಡಿ 4 ಕೊಠಡಿಗಳನ್ನು ಬಳಸುತ್ತೇವೆ. ಉಳಿದದ್ದನ್ನು ಮೈಸೂರು ವಿ.ವಿ. ಬಳಸಬಹುದು. ವಿಧಾನಸಭೆ ಚುನಾವಣೆ ಪ್ರಕಟವಾದರೆ ಯೋಜನೆಯು ಮತ್ತಷ್ಟು ಮುಂದಕ್ಕೆ ಹೋಗಲಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಸಚಿವ ಸಂಪುಟ ಸಭೆಯ ಅನುಮೋದನೆಗೆ ಕಳುಹಿಸಬೇಕು. ನವೀಕರಣ ಮಾಡದಿದ್ದರೆ ಇಡೀ ಕಟ್ಟಡ ಬಿದ್ದು ಹೋಗುತ್ತದೆ. ಕೇಂದ್ರ ಸ್ಥಾಪನೆಯಿಂದ ವಿಶ್ವವಿದ್ಯಾಲಯಕ್ಕೆ ಗೌರವ ಬರುತ್ತದೆ’ ಎಂದು ತಿಳಿಸಿದರು.

‘ಜಯಲಕ್ಷ್ಮೀವಿಲಾಸ ಅರಮನೆ ಕಟ್ಟಡ ಹಸ್ತಾಂತರ ಸಂಬಂಧ ಚರ್ಚಿಸಿ, 2 ದಿನಗಳಲ್ಲಿ ತೀರ್ಮಾನಿಸುತ್ತೇವೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದನ್ನು ತಕ್ಷಣ ಮಾಡುತ್ತೇವೆ. ನಮ್ಮಿಂದ ವಿಳಂಬವಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT