ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರೂಪಿ: ವಿವಾದಕ್ಕೆ ಆಸ್ಪದ ಕೊಡಬೇಡಿ

ಸಭೆಯಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ
Last Updated 30 ನವೆಂಬರ್ 2022, 15:35 IST
ಅಕ್ಷರ ಗಾತ್ರ

ಮೈಸೂರು: ‘ದಸರಾ ನಂತರ, ಡಿ.8ರಿಂದ 15ರವರೆಗೆ ನಡೆಯುತ್ತಿರುವ ಅತಿ ದೊಡ್ಡ ಕಾರ್ಯಕ್ರಮವಾದ ಬಹುರೂಪಿ ರಾಷ್ಟ್ರೀಯ ರಂಗೋತ್ಸವವು ಸಾಂಸ್ಕೃತಿಕ ನಗರಿ ಮೈಸೂರಿನ ‘ಬ್ರ್ಯಾಂಡ್‌’ ಆಗಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ರಂಗಾಯಣ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜೈಪುರ ಸಾಹಿತ್ಯ ಉತ್ಸವದಂತೆ 22ನೇ ಬಹುರೂಪಿಯೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಕಲಾವಿದರು, ಪ್ರೇಕ್ಷಕರನ್ನು ಚೆನ್ನಾಗಿ ಉಪಚರಿಸುವ ಮೂಲಕ ಮೈಸೂರಿನ ಘನತೆಯನ್ನು ಹೆಚ್ಚಿಸಬೇಕು. ರಂಗೋತ್ಸವದಲ್ಲಿ ಯಾವುದೇ ವಿವಾದಾತ್ಮಕ ಅಥವಾ ನಿಷೇಧಿತ ನಾಟಕಗಳನ್ನು ಪ್ರದರ್ಶಿಸಬಾರದು. ಸರ್ಕಾರ ಅನುಮೋದಿಸಿರುವ ನಾಟಕಗಳ ಪ್ರದರ್ಶನ ನಡೆಯಲಿ. ಒಟ್ಟಿನಲ್ಲಿ ರಂಗೋತ್ಸವ ನೆನಪಿನಲ್ಲಿ ಉಳಿಯಬೇಕು. ಅತಿಥಿಗಳ ವಸತಿ ವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಯಾವುದೇ ಲೋಪವಿಲ್ಲದಂತೆ ಜವಾಬ್ದಾರಿ ನಿರ್ವಹಿಸಬೇಕು. ಅವ್ಯವಸ್ಥೆ, ಅವಘಡಗಳಾಗದಂತೆ ನೋಡಿಕೊಳ್ಳಬೇಕು’ ಎಂದರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ‘ರಂಗೋತ್ಸವದಲ್ಲಿ 8 ದಿನಗಳವರೆಗೆ ರಂಗಾಯಣದ 5 ಸ್ಥಳಗಳಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟು 21 ನಾಟಕಗಳು ಪ್ರದರ್ಶನಗೊಳ್ಳಲಿವೆ. ಭಾರತೀಯತೆ ಎಂಬುದು ಈ ಬಾರಿಯ ವಿಷಯವಾಗಿದ್ದು, ವಿಚಾರಸಂಕಿರಣವೂ ಇರಲಿದೆ. ಕಲಾಮಂದಿರದ ಸುತ್ತಮುತ್ತ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು.

‘ಹೊರ ರಾಜ್ಯಗಳಿಂದ ಆಗಮಿಸುವ ಕಲಾವಿದರ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಆರೋಗ್ಯ ಇಲಾಖೆಯವರು ನಡೆಸಬೇಕು’ ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಡಿಸಿಪಿ ಗೀತಾ ಪ್ರಸನ್ನ, ಪ್ರವಾಸೋದ್ಯಮ ಇಲಾಖೆಯ ರಾಜೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT