ಶುಕ್ರವಾರ, ಡಿಸೆಂಬರ್ 2, 2022
20 °C
ವಿಶೇಷ ಅನುದಾನ: ಸಿಎಂ ಬಳಿಗೆ ನಿಯೋಗ

ಪಾರಂಪರಿಕ ಕಟ್ಟಡಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ಕ್ರಮ: ಮೇಯರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಗರದ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ವಿಶೇಷ ಅನುದಾನವನ್ನು ಕೋರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿಗೆ ನಿಯೋಗ ತೆರಳಲಾಗುವುದು’ ಎಂದು ಮೇಯರ್‌ ಶಿವಕುಮಾರ್‌ ತಿಳಿಸಿದರು.

ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರೊಂದಿಗೆ ಶೀಘ್ರದಲ್ಲೇ ತೆರಳಲಾಗುವುದು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಇಂತಿಷ್ಟು ಅನುದಾನವನ್ನು ಪ್ರತಿ ಬಜೆಟ್‌ನಲ್ಲೂ ಕಾಯ್ದಿರಿಸುವಂತೆಯೂ ಕೋರಲಾಗುವುದು’ ಎಂದು ಹೇಳಿದರು.

‘ಮೈಸೂರನ್ನು ಪಾರಂಪರಿಕ ನಗರಿ ಎಂದೂ ಕರೆಯುತ್ತೇವೆ. ಆ ಬಿರುದು ಜಾರಿ ಹೋಗುವ ಆತಂಕ ಎದುರಾಗಿದೆ. ಹಲವು ಪಾರಂಪರಿಕ ಕಟ್ಟಡಗಳು ಕುಸಿದು ಬೀಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೇ, ಹಲವು ಕಟ್ಟಡಗಳು ಶಿಥಿಲಗೊಂಡಿವೆ. ನಗರಪಾಲಿಕೆಯ ಕೇಂದ್ರ ಕಟ್ಟಡವೂ‌ ದುಃಸ್ಥಿತಿಯಲ್ಲಿದೆ‌. ಹೀಗಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.

ದೊಡ್ಡ ಹೆಜ್ಜೆ ಇಡಬೇಕಾಗಿದೆ:

‘ದುಃಸ್ಥಿತಿಯಲ್ಲಿರುವ ಕಟ್ಟಡಗಳನ್ನು ಸುಸ್ಥಿತಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ತಜ್ಞರು ಸಮೀಕ್ಷೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ದೊಡ್ಡ ಹೆಜ್ಜೆ ಇಡಬೇಕಾಗಿದೆ ಎಂದು ಮುಖ್ಯಮಂತ್ರಿ ಅವರನ್ನೂ ಕೋರಲಾಗುವುದು’ ಎಂದು ತಿಳಿಸಿದರು.

‘ಪಾಲಿಕೆಯ ಮುಖ್ಯ ಕಟ್ಟಡ, ದೊಡ್ಡಗಡಿಯಾರ, ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ವಿಶ್ವೇಶ್ವರಯ್ಯ ಕಟ್ಟಡಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಪುರಭವನದ ಒಂದು ಭಾಗವನ್ನು ಕಂಬ ಕೊಟ್ಟು ನಿಲ್ಲಿಸಲಾಗಿದೆ. ಅದು ಯಾವಾಗ ಬೇಕಾದರೂ ಬೀಳುವ ಸಾಧ್ಯತೆ ಇದೆ. ಹೀಗಾಗಿ, ಸರ್ಕಾರದಿಂದ ಅನುದಾನ ಬರುವುದು ತಡವಾದರೆ ಪಾಲಿಕೆಯ ಅನುದಾನವನ್ನೇ ಬಳಸಲಾಗುವುದು. ಮೊದಲಗೆ ಪಾಲಿಕೆಯ ಮುಖ್ಯ ಕಟ್ಟಡ, ದೊಡ್ಡ ಗಡಿಯಾರ ಹಾಗೂ ಪುರಭವನದ ದುರಸ್ತಿಗೆ ತಜ್ಞರ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಲಹೆಗಳೇನು?:

ಪಾರಂಪರಿಕ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಮಾತನಾಡಿ, ‘ಪಾರಂಪರಿಕ ಕಟ್ಟಡಗಳನ್ನು ಸಾಯಲು ಬಿಡಬಾರದು. ಉಳಿಸಿಕೊಳ್ಳಲು ವ್ಯವಸ್ಥಿತವಾದ ಯೋಜನೆ ಕೈಗೊಳ್ಳಬೇಕು. ಸರ್ಕಾರವು 2004ರಿಂದ 20 ಪಾರಂಪರಿಕ ಪ್ರದೇಶಗಳ‌ನ್ನು ಘೋಷಿಸಿದೆ. ಆದರೆ, ರಕ್ಷಣೆಗೆ ಸಂಬಂಧಿಸಿದ ಕ್ರಮಗಳನ್ನು ಈವರೆಗೂ ಕೈಗೊಂಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನಿಯಮದಂತೆ, ಸ್ವಯಂ ಸೇವಾ ಸಂಸ್ಥೆಗಳಿಂದ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅದನ್ನು ಬಳಸಿಕೊಳ್ಳುತ್ತಿಲ್ಲ. ಪಾಲಿಕೆಯ ಎಂಜಿನಿಯರ್‌ಗಳಿಗೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಪಾಲಿಕೆಯಲ್ಲಿ ಪರಂಪರೆ ಕೋಶವನ್ನು ಪುನರಾರಂಭಿಸಬೇಕು. ಕಟ್ಟಡಗಳು ಶಿಥಿಲವಾದ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಮಳೆ ನೀರು ಚಾವಣಿಯಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ನಿರ್ವಹಣೆಯನ್ನು ಖಾಸಗಿಯವರಿಗೆ (ದತ್ತು) ಕೊಡಲು ಅವಕಾಶ ಇದೆ‌. ಅದನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಗರದ ವಿವಿಧೆಡೆ, ಪರಂಪರೆಗೆ ವಿರುದ್ಧವಾಗಿ ಅಳವಡಿಸಿರುವ ಡಿಜಿಟಲ್ ಬೋರ್ಡ್‌ಗಳನ್ನು ತೆಗೆಸಬೇಕು. ಕಟ್ಟಡಗಳಿಗೆ ರಂದ್ರ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ಕಟ್ಟಡಗಳಿಗೂ ಗೆದ್ದಲು ಹುಳುಗಳು, ಇಲಿ–ಹೆಗ್ಗಣಗಳ ನಾಶಕ್ಕೆ ಔಷಧಿ ಸಿಂಪಡಿಸಬೇಕು’ ಎಂದು ತಿಳಿಸಿದರು.

ತಾರ್ಕಿಕ ಅಂತ್ಯಕ್ಕೆ:

ಪ್ರತಿಕ್ರಿಯಿಸಿದ ಮೇಯರ್, ‘ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತು ಪಾಲಿಕೆಯ ಎಂಜಿನಿಯರ್‌ಗಳಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು. ಮುಂದಿನ ಪೀಳಿಗೆಗೆ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕಾಗಿದೆ. ಆದರೆ, ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕ್ರಮವಾಗುತ್ತಿಲ್ಲ ಎಂಬ ನೋವು ಜನರಿಗಿದೆ. ಅದನ್ನು ನಿವಾರಿಸಲು, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ’ ಎಂದು ಭರವಸೆ ನೀಡಿದರು.

ಉಪ ಮೇಯರ್‌ ಡಾ.ಜಿ.ರೋಪಾ ಯೋಗೇಶ್, ನಮ್ಮ ಮೈಸೂರು ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ದಶರಥ್, ಪ್ರಾಚ್ಯವಸ್ತು, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕಿ ಸಿ.ಎನ್‌.ಮಂಜುಳಾ, ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ ಎಸ್‌ಇ ಮಹೇಶ್, ಇಇ ರಂಜಿತ್‌ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.