‘ಮಣ್ಣಿನ ಆರೋಗ್ಯ ರಕ್ಷಣೆಯೇ ತುರ್ತು’

ಮೈಸೂರು: ‘ಮಣ್ಣಿನ ಆರೋಗ್ಯ ಕಾಯ್ದುಕೊಳ್ಳಲು ಸಾವಯವ ಕೃಷಿ ಪದ್ಧತಿ ಅನುಸರಿಸುವುದು ತುರ್ತಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಪಡೆಯಬೇಕು’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್ ಪ್ರತಿಪಾದಿಸಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ಇಂಡಿಯನ್ ಫೈಟೊಪೆಥಾಲಜಿಕಲ್ ಸೊಸೈಟಿ’ಯು ಮೈಸೂರು ವಿಶ್ವವಿದ್ಯಾಲಯ ಹಾಗೂ ಕೆಎಸ್‌ಒಯು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸೊಸೈಟಿಯ ಅಮೃತ ಮಹೋತ್ಸವ ಸಮ್ಮೇಳನವನ್ನು ವರ್ಚ್ಯುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಪಂಜಾಬ್ ಸೇರಿದಂತೆ ಉತ್ತರ ಭಾರತದ ನದಿ ಮೈದಾನಗಳಲ್ಲಿ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಕ್ಯಾನ್ಸರ್ ಕಾರಕಗಳು ಮಾನವನ ದೇಹವನ್ನು ಪ್ರವೇಶಿಸುತ್ತಿದ್ದು, ಕ್ಯಾನ್ಸರ್ ಪೀಡಿತರ ಸಂಖ್ಯೆಯೂ ಹೆಚ್ಚಳಗೊಂಡಿದೆ’ ಎಂದರು.
‘ಮಣ್ಣಿನ ಆರೋಗ್ಯ ಹಾಗೂ ಬೆಳೆ ಇಳುವರಿಯನ್ನೂ ಹೆಚ್ಚಿಸುವ ಸಾವಯವ ಕೃಷಿ ಪದ್ಧತಿಯನ್ನು ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವಿನೊಂದಿಗೆ ಕೃಷಿಕರು ಅನುಸರಿಸಬೇಕು. ಹೀಗಾಗಿಯೇ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರಕ್ಕೆ ಪರಿಚಯಿಸುತ್ತಿದೆ’ ಎಂದು ಹೇಳಿದರು.
‘ದೇಶದ ಪರಿಸರ ಕಾಯ್ದುಕೊಳ್ಳುತ್ತ ಸುಸ್ಥಿರ ಅಭಿವೃದ್ಧಿ ಸಾಧಸಲು ಸಾವಯವ ಕೃಷಿ ನಮ್ಮ ಎದುರಿನ ಆಯ್ಕೆ. ಪರಂಪರಾಗತ ಜ್ಞಾನದ ನೆರವಿನೊಂದಿಗೆ ಭಾರತವನ್ನು ಮತ್ತೆ ಆರೋಗ್ಯಯುತ ದೇಶವಾಗಿಸಲು ರೈತರು ಹಾಗೂ ವಿಜ್ಞಾನಿಗಳು ಪ್ರಯತ್ನಿಸಬೇಕು’ ಎಂದು ತಿಳಿಸಿದರು.
‘ಜನಸಂಖ್ಯೆಯು ಶೇ 60ರಷ್ಟು ಮಂದಿ ಕೃಷಿ ಅವಲಂಬಿತರಾಗಿದ್ದು, ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಕೃಷಿ ಕೊಡುಗೆಯು ಶೇ 20ರಷ್ಟು ಮಾತ್ರವಿದೆ. ಕೃಷಿ ಭೂಮಿ ಬಳಕೆಯಲ್ಲಿ ಚೀನಾಗಿಂತ ಹೆಚ್ಚಿದ್ದರೂ ಕೃಷಿ ಉತ್ಪಾದನೆಯಲ್ಲಿ ಚೀನಾಗಿಂತ ಹಿಂದಿದ್ದೇವೆ. ಪರಿಹಾರದ ಕುರಿತು ಕೃಷಿ ವಿಜ್ಞಾನಿಗಳು ಆಲೋಚಿಸಬೇಕು. ಹೆಚ್ಚು ಸಂಶೋಧನೆ ನಡೆಸಬೇಕು’ ಎಂದು ಸಲಹೆ ನೀಡಿದರು.
‘1947ರಲ್ಲಿ ಆಹಾರ ಧಾನ್ಯಗಳಿಗೆ ಬೇರೆ ದೇಶಗಳನ್ನು ಅವಲಂಬಿಸಬೇಕಿತ್ತು. ಇದೀಗ ಸ್ವಾವಲಂಬನೆ ಸಾಧಿಸಿರುವುದಲ್ಲದೇ ಬೇರೆ ದೇಶಗಳಿಗೆ ಆಹಾರೋತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸಿ ಆರ್ಥಿಕತೆಗೆ ವೇಗವನ್ನು ತಂದುಕೊಡಬೇಕಿದೆ’ ಎಂದು ಹೇಳಿದರು.
‘ಬದಲಾದ ಹವಾಮಾನ: ಕೃಷಿ ಮೇಲೆ ಪರಿಣಾಮ’: ‘ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆ, ಉತ್ತರ ಕರ್ನಾಟಕದಲ್ಲಿ ದಾಳಿಂಬೆ ಕೃಷಿ, ಕೋಲಾರ ಹಾಗೂ ಬೆಂಗಳೂರು ಭಾಗದಲ್ಲಿ ಟೊಮೆಟೊ ಕೃಷಿಗೆ ಹೊಸ ವೈರಸ್‌ಗಳು ಕಾಡುತ್ತಿದ್ದು, ಇಳುವರಿ ಕುಂಟಿತವಾಗಿದೆ. ಗದಗ, ವಿಜಯಪುರ ಮೊದಲಾದ ಜಿಲ್ಲೆಗಳ ಹವಾಮಾನವೂ ವ್ಯತ್ಯಾಸವಾಗಿದ್ದು, ಕೃಷಿ ಮೇಲೆ ಪರಿಣಾಮ ಬೀರಿದೆ’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಂ.ಇಂದ್ರೇಶ್ ಹೇಳಿದರು.
‘ರಾಸಾಯನಿಕಗಳ ಬಳಕೆಯು ಮಣ್ಣಿನ ಆರೋಗ್ಯವಲ್ಲೇ ಮನುಷ್ಯನ ಆರೋಗ್ಯ ಹಾಗೂ ಆಯುಷ್ಯ ಕಡಿಮೆಗೊಳ್ಳುತ್ತಿದೆ. ಕೃಷಿಯ ಶೇ 65ರಷ್ಟು ಉತ್ಪನ್ನಗಳಲ್ಲಿ ರಾಸಾಯನಿಕಗಳಿವೆ’ ಎಂದು ಹೇಳಿದರು.
ಕೆಎಸ್‌ಒಯು ಕುಲಪತಿ ಡಾ.ಶರಣಪ್ಪ ವಿ. ಹಲ್ಸೆ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿಶ್ವವಿದ್ಯಾನಿಲಯ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್, ಇಂಡಿಯನ್ ಫೈಟೊಪೆಥಾಲಜಿಕಲ್ ಸೊಸೈಟಿ ಅಧ್ಯಕ್ಷ ಡಾ.ರಾಕೇಶ್ ಪಾಂಡೆ, ಕಾರ್ಯದರ್ಶಿ ಡಾ.ರಾಬಿನ್ ಗೊಗೊಯಿ, ಡಾ.ಚಂದ್ರನಾಯಕ, ಡಾ.ಎಸ್.ನಿರಂಜನರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.