ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ: ಸಂತ್ರಸ್ತ ಪೋಷಕರ ವಶ ಖಂಡಿಸಿ ಪ್ರತಿಭಟನೆ

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ; ಪ್ರಗತಿಪರ ಮುಖಂಡರಿಂದ ಆಕ್ರೋಶ
Last Updated 18 ನವೆಂಬರ್ 2022, 8:36 IST
ಅಕ್ಷರ ಗಾತ್ರ

ಮೈಸೂರು: ಚಿತ್ರದುರ್ಗದ ಮುರುಘಾಶ್ರೀ ಅತ್ಯಾಚಾರದ ಪ್ರಕರಣದಲ್ಲಿ ಸಂತ್ರಸ್ತ ಮಕ್ಕಳ ಪೋಷಕರು, ಪ್ರಕರಣ ಬೆಳಕಿಗೆ ತಂದ ಒಡನಾಡಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ನೂರಾರು ಮಂದಿ ಬೃಹತ್‌ ಪ್ರತಿಭಟನೆ ನಡೆಸಿದರು.

ನೊಂದ ತಾಯಿಯನ್ನು ಬಿಡುಗಡೆಗೆ ಒತ್ತಾಯಿಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಚಿಂತಕ ಪ.ಮಲ್ಲೇಶ್‌, ‘ಬೇಲಿಯೇ ಎದ್ದು ಹೊಲ ಮೇಯ್ತು ಎಂಬಂತೆ ಈ ಘಟನೆ ನಡೆದಿದೆ. ಸಮಾಜದಲ್ಲಿ ಮೌಲ್ಯಗಳನ್ನು ಪ್ರತಿಷ್ಠಾಪಿಸಿ, ದಾರಿದೀಪವಾಗಿ ಸೈದ್ಧಾಂತಿಕವಾಗಿ ಬದುಕನ್ನು ಕಟ್ಟಿಕೊಡಬೇಕಾದ ವ್ಯಕ್ತಿಗಳೇ ಊಹಿಸಲು ಅಸಾಧ್ಯವಾದ ಅನ್ಯಾಯವನ್ನು ಮಾಡಿದ್ದಾರೆ. ಮುರುಘಾಮಠವು ಜಂಗಮಮಠ. ಅದು ಸ್ಥಾಯಿಯಾಗಿರದೇ, ಸದಾ ಚಲನಶೀಲವಾಗಿತ್ತು. ಇದೀಗ ಪೀಠಾಧಿಪತಿಯಿಂದಲೇ ದೌರ್ಜನ್ಯ ನಡೆದಿದ್ದರೂ, ಸರ್ಕಾರ ಕಣ್ಮುಚ್ಚಿ ಕೂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖೆಯಾಗಲಿ: ಪ್ರತಿಷ್ಠಿತ ಮಠದಲ್ಲಿ ಇಂತಹ ಕೃತ್ಯಗಳು ನಡೆದಿದೆಯೇ ಎಂಬುದನ್ನು ಊಹಿಸಲು ಅಸಾಧ್ಯವಾಗಿದೆ. ಸ್ವಾಮೀಜಿ ವಿರುದ್ಧ ಎರಡು ಸಲ ಫೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣ ದಾಖಲಿಸಿದ್ದರೂ ಕೂಡ, ಪಟ್ಟಭದ್ರ ಹಿತಾಸಕ್ತಿಗಳು ಅವರ ವಿಚಾರಣೆ ನಡೆಸುವ ನೆಪದಲ್ಲಿ ಮತ್ತಷ್ಟು ಸಮಯ ನೀಡುತ್ತಿದೆ. ಮುಂದೊಂದು ದಿನ ಸ್ವಾಮೀಜಿ ಬಿಡುಗಡೆಯಾಗಿ ಹೊರಬಂದರೂ ಅಚ್ಚರಿಯಿಲ್ಲ’ ಎಂದು ತಿಳಿಸಿದರು.

‘ಮರುಘಾ ಶರಣರು ಮೊದಲಿನಿಂದಲೂ ವೈಯಕ್ತಿಕ ಪರಿಚಯವಿದೆ. ಆತನ ನಡೆನುಡಿ, ಮಾತು, ಮುಖಚರ್ಯೆ ಗಮನಿಸಿದರೆ, ದೊಡ್ಡ ಸಂತನಂತೆ ಕಾಣ್ತಾನೆ. ಅಂತಹ ವ್ಯಕ್ತಿ ಎಂತಹ ಕೀಳುಮಟ್ಟದ ಕೆಲಸ ಮಾಡಿದ್ದಾನೆ. ಇಷ್ಟೆಲ್ಲ ಅನ್ಯಾಯ ನಡೆದಿದ್ದರೂ, ಸರ್ಕಾರ ಕಣ್ಮುಚ್ಚಿ ಕೂತಿದೆಯಾ? ಆತನನ್ನು ಉಳಿಸಲು ಹೊರಟಿದೆಯಾ’ ಎಂದು ಈ ವೇಳೆ ಕಿಡಿಕಾರಿದರು.

ಪ್ರತಿಭಟನಾ ಸ್ಥಳದಲ್ಲಿ ಸಂತ್ರಸ್ತ ಪೋಷಕರ ಕಾನೂನು ಹೋರಾಟವನ್ನು ಬೆಂಬಲಿಸಿ, ದೇಣಿಗೆ ಸಂಗ್ರಹಿಸಲಾಯಿತು. ಇದಾದ ಬಳಿಕ ಪ್ರತಿಭಟನಕಾರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ 18 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡ ಮಾಜಿ ಮೇಯರ್‌ ಪುರುಷೋತ್ತಮ್‌, ಒಡನಾಡಿಯ ಸ್ಟ್ಯಾನ್ಲಿ, ಪ್ರೊ. ಸಬಿಹಾ ಭೂಮಿಗೌಡ, ಪ್ರೊ.ಪಿ.ಎನ್‌. ಶ್ರೀದೇವಿ, ಪ್ರೊ. ವನಜಾ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT