ಹುಣಸೂರು: ಹುಣಸೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಉದ್ದೇಶರ್ವವಾಗಿ ಉಪವಿಭಾಗಾಧಿಕಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಆದೇಶ ಹೊರಡಿಸಿದ ಬಳಿಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸುವಂತೆ ಉಪವಿಭಾಗಾಧಿಕಾರಿಗೆ ಆ.24ರಂದು ಆದೇಶಿಸಿದ್ದರು. ಉಪವಿಭಾಗಾಧಿಕಾರಿ ಸ್ಥಳೀಯ ರಾಜಕೀಯದ ಒತ್ತಡಕ್ಕೆ ಮಣಿದು ಚುನಾವಣಾ ದಿನಾಂಕ ಪ್ರಕಟಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಜೆಡಿಎಸ್ ಬೆಂಬಲಿತ ನಗರಸಭೆ ಸದಸ್ಯ ಸತೀಶ್ ಕುಮಾರ್ ಆರೋಪಿಸಿದರು.
ಹುಣಸೂರು ನಗರಸಭೆಯಲ್ಲಿ 31 ಸದಸ್ಯರಿದ್ದು ಈ ಪೈಕಿ ಜೆಡಿಎಸ್– ಬಿಜೆಪಿ ಮೈತ್ರಿಗೆ ಬಹುಮತ ಇದೆ. ಇದನ್ನು ತಿಳಿದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಕುದುರೆ ವ್ಯಾಪಾರ ನಡೆಸುವ ಪ್ರಯತ್ನ ನಡೆಸಿ ಮೈತ್ರಿ ಸದಸ್ಯರು ಒಗ್ಗಟ್ಟು ಪ್ರದರ್ಶನದಿಂದ ಕೈ ಸುಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಹಿನ್ನಲೆಯಲ್ಲಿ ಸ್ಥಳೀಯ ಮಾಜಿ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣೆ ವಿಳಂಬ ಮಾಡಿ ಹಿಂಬಾಗಿಲ ರಾಜಕಾರಣ ನಡೆಸಿದ್ದಾರೆ ಎಂದರು.
ಮಾಜಿ ಶಾಸಕರ ರಾಜಕೀಯ ಶಕ್ತಿಗೆ ಸ್ಥಳಿಯ ಅಧಿಕಾರಿಗಳು ಕುಣಿಯುತ್ತಿದ್ದು, ಇದರ ಪರಿಣಾಮವನ್ನು ಅಧಿಕಾರಿಗಳು ನ್ಯಾಯಾಲಯದಲ್ಲಿ ಎದುರಿಸಬೇಕಾಗುತ್ತದೆ. ನ್ಯಾಯಾಲಯ ಸೆಪ್ಟೆಂಬರ್ ಅಂತ್ಯದೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದರೂ ಅದಕ್ಕೆ ಪೂರಕವಾಗಿ ಕ್ರಮ ಕೈಗೊಂಡಿಲ್ಲ. ಇದರ ಫಲ ಮುಂದಿನ ದಿನದಲ್ಲಿ ಎದುರಿಸಬೇಕಾಗುತ್ತದೆ ಎಂದು ಸದಸ್ಯ, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಹೇಳಿದರು.
ಸ್ಪಷ್ಟನೆ: ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಆ.30 ರಂದು ದಿನಾಂಕ ಪ್ರಕಟಿಸುವ ಪ್ರಕ್ರಿಯೆ ನಡೆಯಲಿದೆ. ಆದೇಶದಂತೆ ಸೆಪ್ಟೆಂಬರ್ ಅಂತ್ಯದೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕು ಎಂದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ರಾಣಿ ಪೆರುಮಾಳ್, ಆಶಾ, ರಮೇಶ್ ದೊಡ್ಡಹೆಜ್ಜೂರು, ಹರೀಶ್, ವಿವೇಕ್, ಶರವಣ, ಕೃಷ್ಣರಾಜಗುಪ್ತ, ರಾಧಾ, ರಿಜ್ವಾನ್, ಸುರೇಂದ್ರ, ಕೆಂಪರಾಜ್, ಬಸವಲಿಂಗಯ್ಯ, ಸೇರಿದಂತೆ ಮೈತ್ರಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.