ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಸಿಗದೆ ದ್ವೇಷಿಸುವ ಮೋದಿ: ರಾಹುಲ್‌ ಗಾಂಧಿ ಅನುಕಂಪ

ವಿವಿಧ ರಂಗದ ಪ್ರತಿನಿಧಿಗಳೊಂದಿಗ ಸಂವಾದ ನಡೆಸಿದ ರಾಹುಲ್‌ ಗಾಂಧಿ
Last Updated 1 ಅಕ್ಟೋಬರ್ 2022, 16:06 IST
ಅಕ್ಷರ ಗಾತ್ರ

ಕಳಲೆ (ಮೈಸೂರು ಜಿಲ್ಲೆ): ‘ಪ್ರಧಾನಿ ನರೇಂದ್ರ ಮೋದಿ ಹಿನ್ನೆಲೆಯನ್ನು ಗಮನಿಸಿದರೆ ಅವರಿಗೆ ಎಲ್ಲಿಯೂ ಪ್ರೀತಿ ಸಿಕ್ಕಿಲ್ಲ. ಹೀಗಾಗಿಯೇ ಈಗ ಎಲ್ಲರನ್ನೂ ದ್ವೇಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅನುಕಂಪ ವ್ಯಕ್ತಪಡಿಸಿದ್ದಾರೆ.

‘ಭಾರತ್‌ ಜೋಡೊ ಪಾದಯಾತ್ರೆ’ಯ ವಿಶ್ವಾಂತಿಯ ಸಮಯದಲ್ಲಿ ಇಲ್ಲಿನ ಕಳಲೆ ಗೇಟ್‌ ಬಳಿ ‘ಕಲೆಯು ದ್ವೇಷವನ್ನು ನಿಗ್ರಹಿಸುತ್ತದೆ’ ಎಂಬ ಶೀರ್ಷಿಕೆಯಲ್ಲಿ ವಿವಿಧ ರಂಗದ ಪ್ರತಿನಿಧಿಗಳೊಂದಿಗೆ ಶನಿವಾರ ಸಂವಾದ ನಡೆಸಿದರು.

‘ಮೋದಿ ಒಂದು ಕಾಲಕ್ಕೆ ಎಲ್ಲರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಅವರ ಪಕ್ಷದ ನಾಯಕರಾರೂ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿಯೇ ಈಗ ಎಲ್‌.ಕೆ.ಅಡ್ವಾಣಿ ಸೇರಿದಂತೆ ಆ ಪಕ್ಷದ ನಾಯಕರೆಲ್ಲರನ್ನೂ ಕಡಗಣಿಸುತ್ತಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.

‘ಆರ್‌ಎಸ್‌ಎಸ್‌ನವರು ಭಯವನ್ನು ಸೃಷ್ಟಿಸುತ್ತಿದ್ದಾರೆ. ನಂತರ ಅದನ್ನು ದ್ವೇಷವನ್ನಾಗಿ ಪರಿವರ್ತಿಸುತ್ತಾರೆ. ಹೀಗಾಗಿ, ಆ ಸಂಘಟನೆಯ ಬಗ್ಗೆ ಭಯವನ್ನು ಬಿಡಿ. ಆಗ ಅದಾಗಿಯೇ ನಿಷ್ಕ್ರಿಯವಾಗುತ್ತದೆ. ದ್ವೇಷವನ್ನು ಬಿತ್ತುತ್ತಿರುವ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ನಾವು ಭಾರತ ಐಕ್ಯತಾ ಯಾತ್ರೆ ನಡೆಸುತ್ತಿದ್ದೇವೆ. ಒಬ್ಬ ರಾಹುಲ್ ನಡೆದರೆ ಭಾರತ್ ಜೋಡೊ ಆಗುವುದಿಲ್ಲ. ಜನರೆಲ್ಲರೂ ಕೈಜೋಡಿಸಿದರೆ ಮಾತ್ರ ಸಾಧ್ಯವಾಗುತ್ತದೆ’ ಎಂದು ಕೋರಿದ್ದಾರೆ.

ದ್ವೇಷದ ಆಯುಧ:

‘ಬಿಜೆಪಿಯವರು ಭಯವನ್ನು ದ್ವೇಷದ ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದೆ ಹಳ್ಳಿಗಳಲ್ಲಿ ಇದ್ದಂತಹ ಸುರಕ್ಷತಾ ಭಾವ ಎಲ್ಲ ಕಡೆಯೂ ಮೂಡಬೇಕು. ಇದಕ್ಕಾಗಿ ಆರ್‌ಎಸ್‌ಎಸ್‌, ಮೋದಿಯನ್ನು ದ್ವೇಷಿಸಬೇಕಿಲ್ಲ. ನಮ್ಮೊಳಗಿನ ಭಯವನ್ನು ಹೋಗಲಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ಬಿಜೆಪಿಯವರು ಅನವಶ್ಯವಾಗಿ ಯೋಜನೆ ರೂಪಿಸುವುದಿಲ್ಲ. ನೋಟು ಅಮಾನ್ಯೀಕರಣದಿಂದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿದವು; ಲಕ್ಷಾಂತರ ಮಂದಿ ನಿರುದ್ಯೋಗಿಗಳಾದರು. ಜನರನ್ನು ಬಡತನಕ್ಕೆ ತಳ್ಳಿ ಗುಲಾಮಗಿರಿಗೆ ತೆಗೆದುಕೊಂಡು ಹೋಗುವುದು ಅವರ ಉದ್ದೇಶ. ಜನರನ್ನು ಸಬಲರನ್ನಾಗಿಸುವ ಬದಲಿಗೆ ದುರ್ಬಲರನ್ನಾಗಿಸುವ ಕಾರ್ಯತಂತ್ರ ಅವರದು. ಅದರ ವಿರುದ್ಧ ನಾವು ಹೋರಾಡಬೇಕು’ ಎಂದು ಕರೆಯನ್ನೂ ನೀಡಿದ್ದಾರೆ ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ:

ಲೇಖಕರು, ಚಿಂತಕರು, ಕಲಾವಿದರು, ಪತ್ರಿಕೋದ್ಯಮ ಕ್ಷೇತ್ರದವರು, ‘ಆರ್‌ಎಸ್ಎಸ್‌ ಭಯ ಬಿತ್ತುವ ಕೆಲಸ ಮಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಪ್ರಶ್ನಿಸಿದರೆ ಕಷ್ಟ ಎನ್ನುವಂತಹ ಆತಂಕದ ವಾತಾವರಣ ನಿರ್ಮಿಸಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಯಕ ಚಿಂತನ್ ವಿಕಾಸ್ ಸಂವಿಧಾನದ ಪೀಠಿಕೆಯ ಕನ್ನಡ ಅನುವಾದವನ್ನು ಸಂಯೋಜಿಸಿ ಹಾಡಿದರು.

‘ದಲಿತ ಎಂಬ ಕಾರಣಕ್ಕೆ ಸರ್ಕಾರ ನಿರ್ಲಕ್ಷಿಸುತ್ತಿದೆ’ ಎಂದರು. ‘ಯಾರನ್ನು ಯಾರೂ ನಿರ್ಲಕ್ಷಿಸಲಾಗದು. ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿ ಹೋಗಬೇಕು. ರಕ್ಷಿಸಿಕೊಳ್ಳಬೇಕಿರುವುದು ನಾವೇ ಅಲ್ಲವೇ?’ ಎಂದು ಕೇಳಿದ್ದಾರೆ.

‘ಮೂರ್ಖರನ್ನು ತಿದ್ದಲು ಹೋಗಬೇಡಿ. ಬದಲಿಗೆ, ಸಜ್ಜನರು, ಮುಗ್ದರನ್ನು ತಿದ್ದಿದ್ದರೆ ಅವರು ನಿಮಗೆ ಕೃತಜ್ಞರಾಗಿರುತ್ತಾರೆ’ ಎಂಬ ಪತ್ರಕರ್ತ ಕೆ.ದೀಪಕ್ ಸಲಹೆ ಪಾಲಿಸುವುದಾಗಿ ರಾಹುಲ್ ಹೇಳಿದ್ದಾರೆ.

ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೇಂಥಿಲ್ ನಿರ್ವಹಿಸಿದರು. ವಿವಿಧ ರಂಗದ ಪ್ರತಿನಿಧಿಗಳಾಗಿ ರವಿಪ್ರಸಾದ್, ರಾಜೇಶ್ ಬಸವಣ್ಣ, ಟಿ.ಗುರುರಾಜ್‌, ಪ್ರೀತಿ ನಾಗರಾಜ್, ಕುಸುಮಾ ಆಯರಹಳ್ಳಿ, ನಿಶಿತಾ, ನಿರಂತರ ಗುರುಪ್ರಸಾದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT