ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣ ಭಾರತೀಯತೆಯ ಆತ್ಮ ಪ್ರದರ್ಶಿಸಲಿ: ಬಸವರಾಜ ಬೊಮ್ಮಾಯಿ

'ಬಹುರೂಪಿ' ವರ್ಣರಂಜಿತ ಚಾಲನೆ: ಭಾರತೀಯ ವೈವಿಧ್ಯ ಅನಾವರಣ
Last Updated 10 ಡಿಸೆಂಬರ್ 2022, 12:39 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕಲಾಮಂದಿರದಲ್ಲಿ ಭಾರತದ ಭೂಪಟದ ಕಲಾಕೃತಿಯೊಳಗಿಂದ ಕಲೆ- ಸಂಸ್ಕೃತಿಯನು ಮೈವೆತ್ತು ಬಂದ ಚಿಣ್ಣರಿಂದ ಗುಲಾಬಿ ಹೂಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ‌ 'ಬಹುರೂಪಿ ರಾಷ್ಟ್ರೀಯ ರಂಗೋತ್ಸವ'ಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 'ರಂಗಾಯಣ ಆಧುನಿಕತೆಯನ್ನು ತೋರಿಸುತ್ತಲೇ ಭಾರತೀಯತೆಯ ಆತ್ಮ ಪ್ರದರ್ಶಿಸಬೇಕು. ಮಾನವೀಯತೆ ಗುಣಗಳ ಮೇಲೆ ಪ್ರಯೋಗಗಳಾಗಬೇಕು. ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ನಾಟಕಗಳು ಬೇಕು' ಎಂದರು.

'ಸಮಾಜದಲ್ಲಿ ಹಲವು ವಿಚಾರಗಳಲ್ಲಿ ದಂದ್ವ- ಗೊಂದಲಗಳಿರುತ್ತವೆ. ನಾಟಕಗಳ ಮೂಲಕ ಜನರಲ್ಲಿ ಸ್ಪಷ್ಟತೆಯನ್ನು ಮೂಡಿಸುವ ಕೆಲಸವನ್ನು ರಂಗಾಯಣ ಮಾಡಬೇಕು' ಎಂದು ಹೇಳಿದರು.

'ವಿಶ್ವವಿದ್ಯಾಲಯಗಳಲ್ಲಿ ವೈಚಾರಿಕ ಸಂಘರ್ಷಗಳು ನಡೆಯುತ್ತಿದ್ದವು. ರಂಗಾಯಣದಲ್ಲೂ ವೈಚಾರಿಕ ಸಂವಾದಕ್ಕೆ ಅವಕಾಶ ನೀಡುವ ನಾಟಕಗಳು ಬಂದಿವೆ. ಎಲ್ಲರನ್ನು ಒಳಗೊಳ್ಳುವ ರಂಗಾಯಣ ಸಮಾಜದ ಮುಖ್ಯ ವಾಹಿನಿಯಾಗಬೇಕು. ಸಂಘರ್ಷಗಳಿಂದ ಪಾಠ ಕಲಿತು ಹೊಸ ಪೀಳಿಗೆಗೆ ಸತ್ಯ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು' ಎಂದರು.

'ಶಬ್ದ, ಭಾಷೆಯಿಂದ ತಿಳಿಸಲು ಆಗುವುದಿಲ್ಲವೋ ರಂಗದ ಮೂಲಕ ಸುಲಭವಾಗಿ, ಸಹಜವಾಗಿ ತಲುಪಿಸಬಹುದು. ಕಲಾವಿದರು ತಮ್ಮ ಅಭಿನಯ ಸೂಕ್ಷ್ಮತೆಯಿಂದ ಸಮಾಜಕ್ಕೆ ವಿಚಾರಗಳನ್ನು ಹಾಗೂ ನೆಲದ ಸಂಸ್ಕೃತಿಯನ್ನು ವರ್ಗಾಯಿಸಬೇಕು' ಎಂದು ತಿಳಿಸಿದರು.

'ನಾಟಕ, ಅಭಿನಯ ಸಹಜವಾಗಿರಬೇಕು. ಭಾವನಾತ್ಮಕ ವಿಚಾರವನ್ನು ನೈಜವಾಗಿ ಮಾಡಬೇಕು. ಬದುಕಿನಲ್ಲಿ ಯಾರೂ ಸಹಜವಾಗಿರುವುದಿಲ್ಲ. ನಿರ್ಬಂಧಿತ ಬದುಕನ್ನು ನಾವು ಬದುಕುತ್ತಿದ್ದೇವೆ. ಮುಕ್ತವಾಗಿ ಬದುಕುತ್ತಿಲ್ಲ. ಮುಗ್ಧತೆ ಮಾಯವಾಗಿದೆ' ಎಂದು ಹೇಳಿದರು.

'ಸ್ವಾರ್ಥಕ್ಕಾಗಿ ಕೃತಕವಾಗಿ ಬದುಕಲು ಹೋದಾಗ ಮುಗ್ಧತೆ ನಾಶವಾಗುತ್ತದೆ. ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಕಷ್ಟ. ರಾಜಕಾರಣಿಗೆ ಮಾತ್ರ ಇನ್ನೂ ಕಷ್ಟ. ಹೃದಯ ಶುದ್ಧವಿದ್ದರೆ ಸತ್ಯ ಅಭಿವ್ಯಕ್ತಗೊಳ್ಳುತ್ತದೆ' ಎಂದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, 'ರಂಗಾಯಣದ ಹಿಂದೆ ಎಡಪಂಥೀಯರ ಅಧಿಪತ್ಯವಿತ್ತು. ಬಹುರೂಪಿ ಉತ್ಸವವನ್ನು ನಗರ ನಕ್ಸಲರೇ ಉದ್ಘಾಟಿಸಿದ್ದರು. ನಾನು ನಿರ್ದೇಶಕನಾಗಿ ಬಂದು ರಾಷ್ಟ್ರೀಯತೆ ಆಧಾರದ ಮೇಲೆ ರಂಗಾಯಣ ಕಟ್ಟಿದ್ದೇನೆ' ಎಂದರು.

'ಎಡಚರು ನನ್ನನ್ನು ಬಗ್ಗಿಸಲು ನೋಡಿದರು‌. ತೊಂದರೆ ಕೊಟ್ಟಿದ್ದರು. ಕಿರುಕುಳ ನೀಡಿದ್ದರು. ಪ್ರತಿಭಟನೆಗಳನ್ನು ಮಾಡಿದರು‌. ಅಂಥ ಮಜಾವಾದಿಗಳ ತೆಕ್ಕೆಗೆ ರಂಗಾಯಣ ಮತ್ತೆ ಹೋಗಬಾರದು' ಎಂದು ಹೇಳಿದರು.

'ರಂಗಾಯಣಕ್ಕೆ ಸ್ಥಳದ ಕೊರತೆಯಿದ್ದು, ಹೊಸ ಭೂಮಿ ನೀಡಬೇಕು. ಟಿಪ್ಪು ನಿಜಕನಸುಗಳು ನಾಟಕ ರಾಜ್ಯದಾದ್ಯಂತ ಪ್ರದರ್ಶಿಸಲು ರಂಗಸಂಚಾರಕ್ಕೆ ಅನುದಾನ ನೀಡಬೇಕು' ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಚಲನಚಿತ್ರ ನಟ ರಮೇಶ್ ಅರವಿಂದ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ‌ ಸಿಇಒ ಬಿ.ಆರ್.ಪೂರ್ಣಿಮಾ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT