ಹುಣಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನೀವು ನೀಡಿದ ಮತದಿಂದ ಗೆದ್ದು ನರೇಂದ್ರ ಮೋದಿ ಶಕ್ತಿ ಮತ್ತಷ್ಟು ವೃದ್ಧಿಸಲು ಸಾಧ್ಯವಾಗಿದೆ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತಾಲ್ಲೂಕಿನ ಕಟ್ಟೆ ಮಳಲವಾಡಿ ಗ್ರಾಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಅಮೂಲ್ಯ ಮತ ನೀಡಿದ್ದರಿಂದ ಇಂದು ನಾನು ಸಂಸದನಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ. ಕೇಂದ್ರದಿಂದ ಕ್ಷೇತ್ರದ ಜಿಲ್ಲೆಗಳಿಗೆ ಹಲವು ಯೋಜನೆ ತರುವ ಗುರಿ ಹೊಂದಿದ್ದೇನೆ. ಈಗಾಗಲೇ ಅನುಷ್ಠಾನಗೊಂಡಿರುವ ಯೋಜನೆ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡಿ ಅಭಿವೃದ್ಧಿಗೆ ಕೈ ಜೋಡಿಸಲಿದ್ದೇನೆ. ಹುಣಸೂರು ತಾಲ್ಲೂಕಿನಲ್ಲಿ ಹಲವು ಸಮಸ್ಯೆ ಇದ್ದು, ಪ್ರಮುಖವಾಗಿ ವಾಣಿಜ್ಯ ಬೆಳೆ ತಂಬಾಕು ಬೆಳೆಗಾರರಿಗೆ ಪರವಾನಗಿ ಹಾಗೂ ದಂಡ ಸೇರಿ ಹಲವು ಸಮಸ್ಯೆ ಇದ್ದು, ಈಗಾಗಲೇ ಮಾಜಿ ಸಂಸದರು ಕೆಲವೊಂದು ಬಗೆ ಹರಿಸಿದ್ದಾರೆ. ಉಳಿದ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸುವೆ’ ಎಂದರು.
‘ರಾಜ್ಯದಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರವನ್ನು ಮಾದರಿಯನ್ನಾಗಿಸುವ ದೃಷ್ಠಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ’ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಕಾಂತರಾಜು, ನಗರ ಘಟಕದ ಅಧ್ಯಕ್ಷ ನಾರಾಯಣ್, ಮುಖಂಡರಾದ ನಾಗರಾಜ್ ಮಲ್ಲಾಡಿ, ಹನಗೋಡು ಮಂಜುನಾಥ್, ಚಂದ್ರಶೇಖರ್, ರಮೇಶ್, ದಿನೇಶ್ ಭಾಗವಹಿಸಿದ್ದರು.