ಮೈಸೂರು: ಚಿಗರೆಯಂತೆ ಓಡಿದ ನಗರದ ಯೂನಿಕ್ ಅಥ್ಲೆಟಿಕ್ಸ್ ಕ್ಲಬ್‌ನ ಎಚ್.ಡಿ.ದೊರೆ ಹಾಗೂ ಕೆ.ಪುಟ್ಟಸ್ವಾಮಿ ಪ್ರೌಢಶಾಲೆಯ ಎಸ್.ಜಯಶ್ರೀ, ‘ಚಾಮುಂಡಿ ರನ್’ 4 ಕಿ.ಮೀ ರಸ್ತೆ ಓಟದ ಸ್ಪರ್ಧೆಯಲ್ಲಿ ಗೆಲುವಿನ ಗುರಿ ಮುಟ್ಟಿ ಪ್ರಶಸ್ತಿ ಗೆದ್ದರು.
ರಾಮಕೃಷ್ಣನಗರದಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ‘ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್’ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಮುಂಜಾನೆಯ ಚಳಿಯಲ್ಲೂ ಬೆವರು ಹರಿಸಿದರು. ಓಟದ ಸಂಭ್ರಮದಲ್ಲಿ ಭಾಗಿಯಾದರು.
ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಐಡಿಯಲ್ ಜಾವಾ ರೋಟರಿ ಶಾಲೆಯ ಅಜಯ್ ಪೃಥ್ವಿರಾಜ್, ಪುಟ್ಟಸ್ವಾಮಿ ಪ್ರೌಢಶಾಲೆಯ ಎಂ.ದಿಲೀಪ್, ಬಾಲಕಿಯರ ವಿಭಾಗದಲ್ಲಿ ಕುರುಬೂರು ನಿರ್ವಾಣ ಸ್ವಾಮಿ ಪ್ರೌಢಶಾಲೆಯ ಎಂ.ಅನನ್ಯಾ, ಪುಟ್ಟಸ್ವಾಮಿ ಪ್ರೌಢಶಾಲೆಯ ದಿವ್ಯಶ್ರೀ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.
2 ಕಿ.ಮೀ ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ಯೂನಿಕ್ ಅಥ್ಲೆಟಿಕ್ಸ್ ಕ್ಲಬ್‌ನ ಸುಭಾಷ್ ಗೌಡ, ಆದರ್ಶ ವಿದ್ಯಾಲಯದ ಲಲಿತ್ ಕಿಶೋರ್, ಸಿರಿಶ್; ಬಾಲಕಿಯರ ವಿಭಾಗದಲ್ಲಿ ಕುರುಬೂರು ವಿದ್ಯಾದರ್ಶಿನಿ ಶಾಲೆಯ ಇಂಚರಾ, ಮೇಘನಾ ಹಾಗೂ ನಂಜನಗೂಡಿನ ಆದರ್ಶ ವಿದ್ಯಾಲಯದ ಎಸ್.ಖುಷಿ ಮೊದಲ ಮೂರು ಸ್ಥಾನ ಪಡೆದು ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು.
ಸ್ಪರ್ಧೆಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ಸ್ಕೇಟಿಂಗ್ ಪಟು ಕೆ.ಕಾಂತರಾವ್ ಅವರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಅಮ್ಮ ಸಂತೋಷ್, ಉದ್ಯಮಿ ಸಿ.ಎಸ್.ರಂಗರಾಜ್, ಮುಖಂಡರಾದ ಆರ್.ದಿನೇಶ್, ಲಕ್ಷ್ಮಿ, ಉದ್ಯಮಿ ಎ.ಬಿ.ದೊಡ್ಡಮನಿ, ಕ್ಲಬ್ ಉಪಾಧ್ಯಕ್ಷ ಎಂ.ಎನ್.ರಮೇಶ್, ಆರ್.ವೈ.ಅರುಣ್, ಕಾರ್ಯದರ್ಶಿ ಪ್ರಕಾಶ್, ಮಂಜುನಾಥಗೌಡ ಹಾಜರಿದ್ದರು.