ಮೈಸೂರು: ‘ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ಯೋಜನೆಗೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ. ರಾಜ್ಯ ಸರ್ಕಾರವು ಪ್ರಸ್ತಾವ ಸಲ್ಲಿಸಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವುದು ಇಲ್ಲಿ ಪರಿಸರ ಪ್ರೇಮಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. ಯೋಜನೆಯನ್ನು ಕೈಬಿಡಲಾಗಿದೆ ಎಂದು ಭಾವಿಸಿದ್ದವರಿಗೆ ಸಚಿವರು ಹೇಳಿಕೆಯು ಬರಸಿಡಿಲು ಬಡಿದಂತಾಗಿದೆ.
ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ಯೋಜನೆಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ‘ಬೆಟ್ಟ’ವನ್ನು ರೋಪ್‌ವೇ ಗುಮ್ಮ ಕಾಡುತ್ತಲೇ ಇರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ.
2022–23ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಪ್ರಸ್ತಾಪಿಸುತ್ತಿದ್ದಂತೆಯೇ ಇಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪರಿಸರ ಪ್ರಿಯರು, ಸಾಮಾಜಿಕ ಸಂಘಟನೆಗಳು ಒಗ್ಗೂಡಿ ‘ಚಾಮುಂಡಿಬೆಟ್ಟ ಉಳಿಸಿ ಸಮಿತಿ’ ರಚಿಸಿ ಹೋರಾಟ ನಡೆಸಿದ್ದವು. ವನ್ಯಜೀವಿ ತಜ್ಞರು, ಭೂಗರ್ಭ ಶಾಸಜ್ಞರು, ಪರಿಸರ ಪ್ರೇಮಿಗಳು, ಎಂಜಿನಿಯರ್‌ಗಳು, ವಕೀಲರು, ರಾಜಕಾರಣಿಗಳು, ಲೇಖಕರು ಸೇರಿದಂತೆ ಹಲವರು ಕೈ ಜೋಡಿಸಿದ್ದರು. ಬೆಟ್ಟದಲ್ಲಿ ರೋಪ್ ವೇ ಬಂದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನೂ ತಜ್ಞರು ವಿಸ್ತೃತವಾಗಿ ತೆರೆದಿಟ್ಟಿದ್ದರು.
ಸಹಿ ಸಂಗ್ರಹ ಚಳವಳಿ:
ಯೋಜನೆ ವಿರೋಧಿಸಿ ಆನ್‌ಲೈನ್‌ನಲ್ಲಿ 70ಸಾವಿರ ಹಾಗೂ ಭೌತಿಕವಾಗಿ ನಗರದ ವಿವಿಧೆಡೆ 50ಸಾವಿರಕ್ಕೂ ಹೆಚ್ಚಿನ ಜನರಿಂದ ಸಹಿ ಸಂಗ್ರಹಿಸಲಾಗಿತ್ತು. ರೋಪ್ ವೇ ಇಲ್ಲದೆಯೂ ಸಾಕಷ್ಟು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವೂ ನಡೆದಿತ್ತು. ‘ಮೈಸೂರಿನ ಪ್ರಾಕೃತಿಕ ಸೊಬಗು ಚಾಮುಂಡಿ ಬೆಟ್ಟ ಸಂಕಷ್ಟದಲ್ಲಿದ್ದು, ಸಂರಕ್ಷಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಪರಿಸರ ಹೋರಾಟಗಾರ ಭಾಮಿ ವಿ.ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನೂ ಬರೆದಿದ್ದರು.
ಇದೆಲ್ಲದರ ಹಿನ್ನೆಲೆಯಲ್ಲಿ, ಜುಲೈ 6ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲೂ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ‘ಸುಮಾರು 1,673 ಎಕರೆಯಲ್ಲಿ ಹರಡಿರುವ ಬೆಟ್ಟವನ್ನು ಶ್ರದ್ಧಾ ಕೇಂದ್ರವನ್ನಾಗಿಯೇ ಕಾಪಾಡಿಕೊಳ್ಳಬೇಕು; ಅಲ್ಲಿಗೆ ‘ರೋಪ್ ವೇ’ ಯೋಜನೆ ಅಗತ್ಯವಿಲ್ಲ’ ಎಂಬ ಸ್ಪಷ್ಟ ಅಭಿಪ್ರಾಯಕ್ಕೆ ಬರಲಾಗಿತ್ತು.
ಅಗತ್ಯವಿಲ್ಲ ಎಂದಿದ್ದ ಸಂಸದ:
ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ ಸಿಂಹ ಕೂಡ ದನಿಗೂಡಿಸಿದ್ದರು. ‘ಬೆಟ್ಟಕ್ಕೆ ಜನರು ಭಕ್ತಿಯಿಂದ ಬರುತ್ತಾರೆಯೇ ಹೊರತು ಪ್ರವಾಸಕ್ಕಾಗಿ ಅಲ್ಲ. ಅದನ್ನು ಭಕ್ತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಕಾಪಾಡಿಕೊಳ್ಳಬೇಕು. ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಪಡಿಸಲು ಬಹಳಷ್ಟು ತಾಣಗಳಿವೆ. ಇದು ಇತರ ಬೆಟ್ಟಗಳಂತಲ್ಲ. ಬಹಳ ಸೂಕ್ಷ್ಮವಾದುದು’ ಎಂದು ಪ್ರತಾಪ ಹೇಳಿದ್ದರು. ‘ಈ ಅಭಿಪ್ರಾಯವನ್ನೂ ಒಗ್ಗೂಡಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಹಾಗೂ ಯೋಜನೆ ಕೈಬಿಡುವಂತೆಯೂ ತಿಳಿಸಲಾಗುವುದು’ ಎಂದು ಸಚಿವರು ತಿಳಿಸಿದ್ದರು.
ಹೀಗಿರುವಾಗ, ಕೇಂದ್ರ ಸಚಿವರು ಯೋಜನೆಯ ಬಗ್ಗೆ ಪ್ರಸ್ತಾಪಿಸಿರುವುದು ಯೋಜನೆಯು ಜೀವಂತವಾಗಿಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸ ಸಭೆಯ ನಿರ್ಣಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿಲ್ಲವೇ, ತಿಳಿಸಿಲ್ಲವೇ, ಹಾಗಿದ್ದರೆ ಅಂದು ಸಚಿವರು ಸಭೆ ನಡೆಸಿದ್ದು ಹೋರಾಟಗಾರರ ಕಣ್ಣೊರೆಸುವ ತಂತ್ರವೇ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.
‘ಕೇಂದ್ರ ಸಚಿವರ ಹೇಳಿಕೆಯು ನಮ್ಮಲ್ಲಿ ದಿಗ್ಭ್ರಮೆ ಮೂಡಿಸಿದೆ. ಆತಂಕವೂ ಉಂಟಾಗಿದೆ. ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯಿಂದ ಶೀಘ್ರದಲ್ಲೇ ಸಭೆ ನಡೆಸಿ, ಯೋಜನೆಗೆ ವಿರೋಧ ವ್ಯಕ್ತವಾಗಿರುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಲಾಗುವುದು’ ಎಂದು ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿಕ್ರಿಯೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ ಲಭ್ಯವಾಗಲಿಲ್ಲ.
ಲಾಭ ಕೇಂದ್ರಿತ ಉದ್ದೇಶಕ್ಕೆ ಬೇಡ
ಚಾಮಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ಪ್ರವಾಸೋದ್ಯಮ ನೀತಿಯನ್ನು ಬದಲಿಸಬೇಕು. ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕೇ ಹೊರತು, ವಾಣಿಜ್ಯ ಮತ್ತು ಲಾಭ ಕೇಂದ್ರಿತ ಉದ್ದೇಶಕ್ಕಲ್ಲ.
–ಎಸ್.ಜಿ.ಒಂಬತ್ಕೆರೆ, ನಿವೃತ್ತ ಮೇಜರ್ ಜನರಲ್
ವಿರೋಧಿಸುತ್ತಿರುವುದರಲ್ಲಿ ಅರ್ಥವಿದೆ
ರೋಪ್‌ವೇ ನಿರ್ಮಾಣ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದ್ದು, ಯೋಜನೆ ಕೈಬಿಡಬೇಕು. ಪರಿಸರವಾದಿಗಳು ಯೋಜನೆ ವಿರೋಧಿಸುತ್ತಿರುವುದರಲ್ಲಿ ಅರ್ಥವಿದೆ.
–ವಿ.ಶ್ರೀನಿವಾಸ್ ಪ್ರಸಾದ್, ಸಂಸದ
ಅವಕಾಶ ಕೊಡುವುದಿಲ್ಲ
ಸರ್ಕಾರವು ಕಣ್ಣೊರೆಸುವ ತಂತ್ರ ಅನುಸರಿಸುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ರೋಪ್‌ವೇ ಯೋಜನೆಗೆ ಅವಕಾಶ ಕೊಡುವುದಿಲ್ಲ. ರದ್ದುಪಡಿಸಲು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸುತ್ತೇನೆ.
–ಜಿ.ಟಿ.ದೇವೇಗೌಡ, ಶಾಸಕ, ಚಾಮುಂಡೇಶ್ವರಿ ಕ್ಷೇತ್ರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.