ಗುರುವಾರ , ಡಿಸೆಂಬರ್ 1, 2022
20 °C

ದಸರಾ ಕ್ರೀಡಾಕೂಟಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ನವರಾತ್ರಿಯಲ್ಲಿ  ಜಗಮಗಿಸುತ್ತಿರುವ ಅರಮನೆ ನಗರಿಯಲ್ಲಿ ಎರಡು ವರ್ಷದ ನಂತರ ಆಯೋಜನೆಗೊಂಡ ದಸರಾ ಕ್ರೀಡಾಕೂಟವು ಸ್ಪರ್ಧಿಗಳಲ್ಲಿ ಅವಕಾಶದ ಹೊಂಬೆಳಗನ್ನು ಮೂಡಿಸಿತ್ತು. 

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಸಮ್ಮುಖದಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಕ್ರೀಡಾಕೂಟಕ್ಕೆ ತ್ರಿವರ್ಣದ ಬಲೂನುಗಳನ್ನು ಹಾರಿ ಬಿಡುತ್ತಿದ್ದಂತೆ  ಸ್ಪರ್ಧಿಗಳಲ್ಲಿ ಸಂತಸದ ಹೊನಲು ಹರಿದಿತ್ತು.  

ಮೈಸೂರು, ಕಲಬುರ್ಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ವಲಯಗಳ ಕ್ರೀಡಾಪಟುಗಳು ಪಥ ಸಂಚಲನ ನಡೆಸಿದರು. ಪೊಲೀಸ್ ಬ್ಯಾಂಡ್ ಸಂಗೀತ ಆಕರ್ಷಿಸಿತು. ಗಣ್ಯರು ಗೌರವ ವಂದನೆ ಸ್ವೀಕರಿಸಿದರು. 

ಸಾಕ್ಷಿ ಮಲಿಕ್ ಮಾತನಾಡಿ, 'ನನಗೆ ಎಂಟು ವರ್ಷವಾಗಿದ್ದಾಗಿನಿಂದಲೂ  ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದೇನೆ. ಒಲಿಂಪಿಂಕ್ಸ್ ನಲ್ಲಿ ಪದಕ ಗೆದ್ದದ್ದು ಅಪೂರ್ವ ಕ್ಷಣ. ಶಿಸ್ತು- ಪರಿಶ್ರಮ ಗುರಿ ತಲುಪಿಸುತ್ತದೆ. ಕನಸುಗಳನ್ನು ಈಡೇರಿಸುತ್ತದೆ' ಎಂದರು. 

'ಮಹಿಳಾ ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಲು ಮೈಸೂರಿನಲ್ಲಿ ಹಾಸ್ಟೆಲ್, ಶಾಲೆಗಳನ್ನು ಆರಂಭಿಸಬೇಕು. ಅದರಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಸ್ಪರ್ಧಿಗಳು ಕೀರ್ತಿ ತರಲು ಸಾಧ್ಯವಾಗುತ್ತದೆ' ಎಂದು ಸಚಿವರಿಗೆ ಮನವಿ ಮಾಡಿದರು. 

ಕೆ.ಸಿ.ನಾರಾಯಣ ಗೌಡ ಮಾತನಾಡಿ, '₹ 504 ಕೋಟಿ ಅನುದಾನದಲ್ಲಿ ರಾಜ್ಯದ ಪ್ರತಿ ಗ್ರಾಮದಲ್ಲೂ ಕ್ರೀಡಾಂಗಣ ನಿರ್ಮಿಸಲಾಗುವುದು. 100 ಗರಡಿ ಮನೆಗಳಿಗೆ ಕಾಯಕಲ್ಪ ನೀಡಲಾಗಿದೆ' ಎಂದರು.

ಅ.2ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 27 ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 4,500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 

ದಸರಾ ಕ್ರೀಡಾಕೂಟದ ಕ್ರೀಡಾಜ್ಯೋತಿಯ ಯಾತ್ರೆಗೆ  ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಕ್ರೀಡಾಜ್ಯೋತಿ ರಿಲೇ ನಡೆದು ಸಂಜೆ 3.30ಕ್ಕೆ ನಜರಾಬಾದ್‌ನ ನಿಂಬುಜಾಂಬ ದೇವಸ್ಥಾನಕ್ಕೆ ತರಲಾಯಿತು. ನಂತರ ಕ್ರೀಡಾಪಟುಗಳಿಂದ ಜ್ಯೋತಿಯನ್ನು ಮೇಯರ್ ಶಿವಕುಮಾರ್ ಸ್ವೀಕರಿಸಿದರು.

ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜ್, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು