ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಇನ್‌ಸ್ಟಾಗ್ರಾಂನಲ್ಲಿ ವಂಚನೆ: ಮೂವರ ಬಂಧನ

ಉಡುಗೊರೆ ಕಳುಹಿಸುವ ನೆಪದಲ್ಲಿ ₹4.77 ಲಕ್ಷ ವಂಚನೆ
Last Updated 10 ಜನವರಿ 2023, 10:03 IST
ಅಕ್ಷರ ಗಾತ್ರ

ಮೈಸೂರು: ‘ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಪರಿಚಯವಾದ ಮಹಿಳೆಗೆ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ₹4.77 ಲಕ್ಷ ವಂಚಿಸಿದ್ದ ಪ್ರಕರಣದಲ್ಲಿ ಅಸ್ಸಾಂನ ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ತಿಳಿಸಿದರು.

ಅಸ್ಸಾಂ ರಾಜ್ಯದ ಕರಿಮ್‌ಗಂಜ್ ಜಿಲ್ಲೆಯ ನಿವಾಸಿಗಳಾದ ಸಿಂಬುಲಾಲ್ ಚೊರಾಯತ್ (26), ಲಾಲ್ ಸಂಗೀಕಾರ್ ಚೊರಾಯತ್ (23) ಮತ್ತು ಹರಿಲಾಲ್ ಚೊರಾಯತ್ (22) ತಮ್ಮೂರಿನಲ್ಲಿದ್ದುಕೊಂಡೇ ವಂಚಿಸಿದ್ದರು. ಅವರಿಂದ 2 ಕೀ ಪ್ಯಾಡ್‌ ಮೊಬೈಲ್‌ ಫೋನ್, 4 ಸ್ಮಾರ್ಟ್‌ ಫೋನ್‌, 2 ಬ್ಯಾಂಕ್‌ ಪಾಸ್‌ಪುಸ್ತಕ, 1 ಮನೆ ಬಾಡಿಗೆ ಕರಾರರು ಪತ್ರ ಹಾಗೂ ₹26 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ವಂಚಿತ ಮಹಿಳೆ, ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದ ಹಿಮಶ್ವೇತಾ ನೀಡಿದ ದೂರಿನ ಮೇರೆಗೆ, 2022ರ ಸೆ.4ರಂದು ಮೈಸೂರಿನ ಸೆನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ವಾಟ್ಸ್‌ಆ್ಯಪ್‌ ಮೂಲಕ ಸಂಭಾಷಣೆ ನಡೆಸಿ, ಐ–ಫೋನ್‌, ಇತರೆ ದುಬಾರಿ ವಸ್ತುಗಳನ್ನು ಕಳುಹಿಸಿರುವುದಾಗಿ ನಂಬಿಸಿದ್ದರು. ಉಡುಗೊರೆಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಆತನನ್ನು ಬಿಡಿಸಿಕೊಳ್ಳಲು ವಿವಿಧ ಬ್ಯಾಂಕ್‌ ಖಾತೆಗೆ ಹಣ ಹಾಕುವಂತೆ ಸೂಚಿಸಿದ್ದರು. ಹಣ ಹಾಕಿ ಒಂದು ತಿಂಗಳಾದರೂ ಮಹಿಳೆಗೆ ಉಡುಗೊರೆ ದೊರಕಿರಲಿಲ್ಲ.

‘ಆರೋಪಿಗಳಿಗೆ ಪರಿಚಯವಿದ್ದ, ಕರೀಂಗಂಜ್ ಜಿಲ್ಲೆಯ ಬಾಲಿಪಿಪಿಲ ನೂರ್ಕಪುಂಜಿ ಗ್ರಾಮದ ಲಾಲ್‌ ಜಮ್ಮುಲ್‌ಗೆ ಪರಿಚಯವಿದ್ದ ನೈಜೀರಿಯಾ ಮೂಲದ ವ್ಯಕ್ತಿಯ ಮೂಲಕವೇ ವಂಚನೆ ನಡೆದಿದೆ. ಜಮ್ಮುಲ್‌ ತನ್ನ ಗ್ರಾಮಸ್ಥರನ್ನು ಬೆಂಗಳೂರಿಗೆ ಕರೆಸಿ, ಅವರ ಆಧಾರ್‌ಕಾರ್ಡ್‌ ವಿಳಾಸವನ್ನು ಬೆಂಗಳೂರಿಗೆ ಬದಲಾಯಿಸಿ, ವಿವಿಧ ಬ್ಯಾಂಕ್‌ಗಳಲ್ಲಿ 39 ನಕಲಿ ಖಾತೆಗಳನ್ನು ತೆರೆದಿದ್ದ. ನಂತರ ಆರೋಪಿಗಳು ಜನರಿಗೆ ಫೋನ್‌ ಮೂಲಕ ಕರೆಮಾಡಿ ಹಣ ಪಡೆದು ವಂಚಿಸುತ್ತಿದ್ದರು. ನೈಜೀರಿಯಾದ ವ್ಯಕ್ತಿಯೇ ಹಣ ಪಡೆದು ಉಳಿದವರಿಗೆ ಹಂಚುತ್ತಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ತಿಳಿಸಿದರು.

‘ಆರೋಪಿಗಳು ಹೆಚ್ಚಾಗಿ ವಾರಾಂತ್ಯದಲ್ಲೇ ಆನ್‌ಲೈನ್‌ ವಂಚನೆ ನಡೆಸುತ್ತಿದ್ದರು. ರಜಾ ದಿನಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸದ ಕಾರಣ ತಕ್ಷಣ ಹಣ ವಹಿವಾಟು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದರು’ ಎಂದರು.

ಸೆನ್‌ ಠಾಣೆಯ ಇನ್ಸ್‌ಪೆಕ್ಟರ್‌ ಶಬ್ಬೀರ್‌ ಹುಸೇನ್‌, ಪಿಎಸ್‌ಐ ಲೋಕೇಶ್‌, ಸಿಬ್ಬಂದಿ ಮಂಜುನಾಥ ರಂಗಸ್ವಾಮಿ, ಮಂಜುನಾಥ ಬಿ.ವಿ.ಮಹದೇವಸ್ವಾಮಿ, ವೆಂಕಟೇಶ, ಪುಷ್ಪಲತಾ, ಮಹೇಶ, ಮಹೇಶ ಕುಮಾರ, ಅಭಿಷೇಕ್‌, ಆದರ್ಶ್‌, ಸಿಂಧು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT