ಮೈಸೂರು: ತಾಲ್ಲೂಕಿನ ವರುಣ ಹೋಬಳಿಯ ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ಕಾಂಪೌಂಡ್ ಬಹುತೇಕ ಪೂರ್ಣಗೊಂಡಿದ್ದು, ಬಣ್ಣ ಹಚ್ಚುವುದು ಹಾಗೂ ಸ್ವಾಗತ ಕಮಾನು ಅಳವಡಿಕೆ ಕಾರ್ಯ ಬಾಕಿ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ, ಈ ಶಾಲೆಯ ಕೌಂಪೌಂಡ್ ನಿರ್ಮಾಣ ಕಾರ್ಯ ಪ್ರಾರಂಭವಾಗಿ ನಾಲ್ಕೈದು ತಿಂಗಳಾದರೂ ಪೂರ್ಣಗೊಂಡಿಲ್ಲದಿರುವುದು ಹಾಗೂ ಶಾಲೆ ಹೆದ್ದಾರಿ ಬದಿಯಲ್ಲೇ ಇರುವುದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಶಿಕ್ಷಕರು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದರ ಪರಿಣಾಮ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು.
ಈ ನಡುವೆ, ಕರ್ನಾಟಕ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಮಲ್ಲನಕುಪ್ಪೆ ಚಂದ್ರಶೇಖರ್ ಅವರು ಉಪ ಲೋಕಾಯುಕ್ತರಿಗೆ ಪತ್ರಿಕೆಯ ವರದಿ ಸಹಿತ ದೂರು ಸಲ್ಲಿಸಿದ್ದರು. ನಂತರ ಕಾಂಪೌಂಡ್ ಕೆಲಸ ಒಂದು ಹಂತಕ್ಕೆ ಬಂದಿದೆ.
ಪತ್ರಿಕೆಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಇಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲೂ ಪ್ರಸ್ತಾಪಿಸಿದ್ದರು. ಡಿಡಿಪಿಐ ಎಚ್.ಕೆ. ಪಾಂಡು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ, ಶಾಲಾ ಮೈದಾನವನ್ನು ಸಮತಟ್ಟು ಮಾಡುವ ಕೆಲಸವೂ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.