ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ಪ್ರಶ್ನಿಸಿ, ಹೋರಾಡಬೇಕು

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ
Last Updated 17 ನವೆಂಬರ್ 2022, 15:19 IST
ಅಕ್ಷರ ಗಾತ್ರ

ಮೈಸೂರು: ‘ಅವ್ಯವಸ್ಥೆ ಎನ್ನುವುದು ವ್ಯಕ್ತಿಯ ತಪ್ಪಲ್ಲ; ಸಮಾಜದ ತಪ್ಪು. ನಾವು ಬದಲಾಗದಿದ್ದರೆ ಶಾಂತಿ ನೆಲೆಸುವುದು ಅಸಾಧ್ಯ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಹೇಳಿದರು.

ಅಖಿಲ ಭಾರತ ಹಿರಿಯ ನಾಗರಿಕರ ಸಂಘ ಹಾಗೂ ರಾಜ್ಯ ಹಿರಿಯ ನಾಗರಿಕರ ಸಂಘದ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ 20ನೇ ರಾಷ್ಟ್ರೀಯ ಹಿರಿಯ ನಾಗರಿಕರ ಸಮ್ಮೇಳನದಲ್ಲಿ ಮಾತನಾಡಿದರು.

‘ಸರ್ಕಾರವು ₹ 1 ಅನುದಾನ ನೀಡಿದಾಗ 15 ಪೈಸೆ ಮಾತ್ರವೇ ಜನರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಇಂದಿಗೂ ಸರ್ಕಾರಿ ವ್ಯವಸ್ಥೆಯಲ್ಲಿ ಅದೇ ಪರಿಸ್ಥಿತಿ ಇದೆ. ಒಂದು ಪಕ್ಷದವರು ನೀವು ಶೇ.40ರಷ್ಟು ಕಮಿಷನ್ ವ್ಯವಹಾರ ಮಾಡಿದ್ದೀರಿ ಎಂದು ಆರೋಪಿಸುತ್ತಾರೆ. ಮತ್ತೊಂದು ಪಕ್ಷದವರು, ನಿಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿರಲಿಲ್ಲವೇ ಎಂದು ಪ್ರತ್ಯುತ್ತರ‌ ಕೊಡುತ್ತಾರೆ. ನಾವು ಶೇ 10ರಷ್ಟು ಕಮಿಷನ್ ಮಾತ್ರ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ’ ಎಂದು ಟೀಕಿಸಿದರು.

ಪಶ್ಚಾತಾಪವಿಲ್ಲ:

‘ನಾವು ತಪ್ಪು ಮಾಡಿದ್ದೇವೆ. ಇನ್ನೊಬ್ಬರಿಗಿಂತ ಕಡಿಮೆ ಮಾಡಿದ್ದೇವೆ ಎಂಬ ಭಾವ ಇದೆಯೇ ಹೊರತು ಕಮಿಷನ್ ತೆಗೆದುಕೊಳ್ಳಬಾರದಿತ್ತು ಎನ್ನುವ ಪಶ್ಚಾತಾಪವಿಲ್ಲ. ಅಡಿಕೆ ಕದ್ದರೂ ಕಳ್ಳನೇ, ಆನೆ ಕದ್ದರೂ ಕಳ್ಳನೇ ಎಂಬುದನ್ನು ರಾಜಕಾರಣಿಗಳು ಮರೆಯಬಾರದು’ ಎಂದರು.

‘ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಕ್ಕೆ ವಿದ್ಯಾರ್ಹತೆಯ ಮಾನದಂಡವಿದೆ. ಆದರೆ, ರಾಜಕಾರಣಿಗಳು ಈ ವ್ಯವಸ್ಥೆಯಿಂದ ಹೊರಗಿರುವುದು ವಿಷಾದನೀಯ. ‌ನಮ್ಮ ಹಣದ ದುರ್ಬಳಕೆ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಧೈರ್ಯವನ್ನು ನಾವು ಬೆಳೆಸಿಕೊಳ್ಳಬೇಕು. ಎಚ್ಚೆತ್ತುಕೊಂಡು ಹೋರಾಡಬೇಕು’ ಎಂದು ಸಲಹೆ ನೀಡಿದರು.

‘ಹಿಂದೆ ಯಾರಾದರೂ ತಪ್ಪು ಮಾಡಿ ಜೈಲಿಗೆ ಹೋದರೆ ಆತನ ಜೊತೆಗೆ ಕುಟುಂಬವನ್ನೂ ಜನರು ಬಹಿಷ್ಕರಿಸುತ್ತಿದ್ದರು. ಆದರೆ, ಈಗ ಜೈಲಿನಿಂದ ಬಿಡುಗಡೆಯಾದಾಗ ಹಾರ ಹಾಕಿ ಸ್ವಾಗತಿಸುತ್ತಿದ್ದೇವೆ. ನಾನಷ್ಟೆ ಅಲ್ಲ, ಮಹಾತ್ಮ ಗಾಂಧೀಜಿಯೂ ಜೈಲಿಗೆ ಹೋಗಿದ್ದರು ಎಂದು ತೃಪ್ತಿ ಪಡುವಂತಹ ಮನಸ್ಥಿತಿಯವರ ಜೊತೆ ಬದುಕುತ್ತಿದ್ದೇವೆ’ ಎಂದು ವಿಷಾದ ವ್ಯಕ್ತ‍ಪಡಿಸಿದರು.

‘ಸಮಾಜದ ಬದಲಾವಣೆಗೆ ನಾವೇ ನಾಂದಿ ಹಾಡಬೇಕು’ ಎಂದು ಹೆಗ್ಡೆ ಹೇಳಿದರು.

ಅಖಿಲ ಭಾರತ ಹಿರಿಯ ನಾಗರಿಕ ಸಂಘದ ಅಧ್ಯಕ್ಷ ವಿಶ್ವಾಸ್ ರಾವ್ ಬದನೆ, ಸಂಘಟನಾ ಅಧ್ಯಕ್ಷ ಎನ್.ಓಬಯ್ಯ, ಬೀರಪ್ಪ ಇದ್ದರು.

ಓಬಯ್ಯ ಸ್ವಾಗತಿಸಿದರು. ರಾಜ್ಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎ.ವೈ. ಬೆಂಡೆಗೇರಿ ವಂದಿಸಿದರು. ಸುಮಾ ಪ್ರಕಾಶ್, ಎ.ಎಸ್.ನಾಗರಾಜ್, ಡಾ.ಬಿ.ನಿರ್ಮಲಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT