ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ವಡಿ, ರಾಜೇಂದ್ರ ಶ್ರೀ ಕೊಡುಗೆ ಅಪಾರ: ಶಾಸಕ ಜಿ.ಟಿ.ದೇವೇಗೌಡ

ಶರಣ ಮಂಡಳಿಯ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅಭಿಮತ
Published : 6 ಸೆಪ್ಟೆಂಬರ್ 2024, 15:36 IST
Last Updated : 6 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಮೈಸೂರು: ‘ಮೈಸೂರು ಭಾಗದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ನೀಡಿದ ಕೊಡುಗೆ ಅಪಾರವಾದುದು’ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಮರಿಸಿದರು.

ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ‘ಮೈಸೂರು ಶರಣ ಮಂಡಳಿ’ಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 109ನೇ ಜನ್ಮ ದಿನಾಚರಣೆ ಹಾಗೂ ‘ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬಡವರ ಮಕ್ಕಳೂ ಶಿಕ್ಷಣ ಹೊಂದಬೇಕು. ಸಮಾನತೆ ಮೂಡಿಸಬೇಕು ಎಂಬುದು ಶ್ರೀಗಳ ಆಶಯವಾಗಿತ್ತು. ನಾವು ಸಮಾಜಕ್ಕಾಗಿ ಮಾಡುವ ಕೆಲಸಗಳು ಶಾಶ್ವತವಾಗಿ ಉಳಿದಿವೆ. ಅಂತಹ ಕಾರ್ಯವನ್ನು ರಾಜೇಂದ್ರ ಶ್ರೀಗಳು ಹಾಗೂ  ಮೈಸೂರು ಮಹಾರಾಜರು ಮಾಡಿದ್ದಾರೆ. ಇಂಥವರನ್ನು ಯುವ ಪೀಳಿಗೆಯು ಆದರ್ಶವಾಗಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರಸ್ತುತ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲೇ ರಾಜಕೀಯ ಅಸ್ಥಿರತೆ ಇದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರಾಜೇಂದ್ರ ಶ್ರೀಗಳ ಜೀವನ ಮತ್ತು ಸಾಧನೆ’ ಕುರಿತು ಉಪನ್ಯಾಸ ನೀಡಿದ ಸುತ್ತೂರಿನ ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ, ‘ಸಂಸ್ಕೃತದಲ್ಲಿ ಪಾಂಡಿತ್ಯ ಪಡೆಯುವ ಅಭಿಲಾಷೆ ಹೊಂದಿದ್ದ ರಾಜೇಂದ್ರ ಶ್ರೀಗಳು ವಾರಾಣಸಿಗೆ ತೆರಳಿ ಗೌರಿಶಂಕರ ಸ್ವಾಮೀಜಿಯನ್ನು ಭೇಟಿಯಾಗಿದ್ದರು. ಸಂಸ್ಕೃತ ಅಧ್ಯಯನ ಮಾಡಿ ನೀವೊಬ್ಬರೆ ಪಾಂಡಿತ್ಯ ಪಡೆಯುವ ಬದಲು, ಕರ್ನಾಟಕದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನಿಮ್ಮ ಆಶೀರ್ವಾದದ ಅಗತ್ಯವಿದೆ ಎಂದು ರಾಜೇಂದ್ರ ಶ್ರೀಗಳಿಗೆ ಗೌರಿಶಂಕರ ಸ್ವಾಮೀಜಿ ಮನಪರಿವರ್ತನೆ ಮಾಡಿದ್ದರು’ ಎಂದು ತಿಳಿಸಿದರು.

‘ಮೈಸೂರಿಗೆ ಮರಳಿದ ಶ್ರೀಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು. ಮೈಸೂರು ಶಿಕ್ಷಣ ಕಾಶಿ ಎನಿಸಿಕೊಳ್ಳಲು ಕಾರಣವಾದರು. ಬಹಳಷ್ಟು ಮಂದಿಗೆ ಉದ್ಯೋಗ ಸಿಗುವಂತೆ ಮಾಡಿ, ಬೆಳಕಾದರು’ ಎಂದು ನೆನೆದರು.

ಐಪಿಎಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ, ಹೋಟೆಲ್ ಉದ್ಯಮಿ ರವಿ ಶಾಸ್ತ್ರಿ, ಮಂಡ್ಯದ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡ, ಎಂ.ರಾಮಪ್ಪ ಹಾಗೂ ಟಿ.ಜಿ. ಆದಿಶೇಷಗೌಡ (ಶಿಕ್ಷಣ), ರಾಮಚಂದ್ರ (ಸಮಾಜಸೇವೆ) ಅವರಿಗೆ ‘ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಮಂಜುನಾಥ್, ಮೈಸೂರು ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಗೌರವಾಧ್ಯಕ್ಷ ಯು.ಎಸ್. ಶೇಖರ್, ಪ್ರಧಾನ ಸಂಚಾಲಕ ಎಂ. ಚಂದ್ರಶೇಖರ್, ಉಪಾಧ್ಯಕ್ಷ ಎ.ಸಿ. ಜಗದೀಶ್, ಜೈಶಂಕರ್ ಇದ್ದರು.

Quote - ಮಾತೃ ಹೃದಯಿ ಆಗಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸರಳ ಜೀವನದ ಮಾದರಿಯನ್ನೂ ನೀಡಿದ್ದಾರೆ ಜಿ.ಎಲ್. ತ್ರಿಪುರಾಂತಕ ಸಂಯೋಜನಾಧಿಕಾರಿ ಜೆಎಸ್ಎಸ್ ಸಂಸ್ಥೆಗಳು ಸುತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT