ಹಾಂಗ್‌ಝೌ: ಭಾರತದ ಪುರುಷರ ಮತ್ತು ಮಹಿಳಾ ಚೆಸ್ ತಂಡಗಳು ಏಷ್ಯನ್ ಗೇಮ್ಸ್‌ನ ಮೂರನೇ ಸುತ್ತಿನಲ್ಲಿ ಭಾನುವಾರ ಉತ್ತಮ ಪ್ರದರ್ಶನ ನೀಡಿ ಸುಲಭ ಜಯ ದಾಖಲಿಸಿದವು.
ಗ್ರ್ಯಾನ್‌ಮಾಸ್ಟರ್‌ಗಳಾದ ಡಿ.ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಇರಿಗೇಶಿ ಮತ್ತು ಪಿ.ಹರಿಕೃಷ್ಣ ಅವರನ್ನು ಒಳಗೊಂಡ ತಂಡ 3–1 ರಿಂದ ಕಜಕಸ್ತಾನ ತಂಡವನ್ನು ಮಣಿಸಿತು. ಮೊದಲ ಸುತ್ತಿನಲ್ಲಿ ಜಯ ದಾಖಲಿಸಿದ್ದ ಅಗ್ರ ಶ್ರೇಯಾಂಕದ ಭಾರತ ತಂಡ ಎರಡನೇ ಸುತ್ತಿನಲ್ಲಿ ಶನಿವಾರ ಪ್ರಬಲ ಉಜ್ಬೇಕಿಸ್ತಾನ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ಕಜಕಸ್ತಾನ ವಿರುದ್ಧ ಮೊದಲ ಬೋರ್ಡ್‌ನಲ್ಲಿ ಗುಕೇಶ್, ಗ್ರ್ಯಾಂಡ್‌ಮಾಸ್ಟರ್ ರಿನತ್ ಜುಮಬರೇವ್ ಅವರನ್ನು ಸೋಲಿಸಿದರು. ಕಪ್ಪು ಕಾಯಿಗಳಲ್ಲಿ ಆಡಿದ ಪ್ರಜ್ಞಾನಂದ ಎರಡನೇ ಬೋರ್ಡ್‌ನಲ್ಲಿ ಜಿಎಂ ಅಲಿಷೇರ್ ಸುಲೀಮೆನೋವ್ ಅವರನ್ನು ಪರಾಭವಗೊಳಿಸಿದರು. ಮೊದಲ ಪಂದ್ಯ ಆಡಿದ ಹರಿಕೃಷ್ಣ ಮತ್ತು ಅರ್ಜುನ್ ಎದುರಾಳಿಗಳ ಜೊತೆ ಡ್ರಾ ಮಾಡಿಕೊಂಡರು.
ಪುರುಷರ ವಿಭಾಗದ ಅಚ್ಚರಿಯ ಫಲಿತಾಂಶದಲ್ಲಿ ಇರಾನ್ 2.5–1.5 ರಿಂದ ಆತಿಥೇಯ ಚೀನಾ ತಂಡಕ್ಕೆ ಆಘಾತ ನೀಡಿತು.
ಎರಡನೇ ಶ್ರೇಯಾಂಕದ ಭಾರತ ಮಹಿಳಾ ತಂಡ 3.5–0.5 ರಿಂದ ನಾಲ್ಕನೇ ಶ್ರೇಯಾಂಕದ ಇಂಡೊನೇಷ್ಯಾ ತಂಡವನ್ನು ಸೋಲಿಸಿ ಸತತ ಮೂರನೇ ಜಯ ದಾಖಲಿಸಿತು. ಕೋನೇರು ಹಂಪಿ, ದ್ರೋಣವಲ್ಲಿ ಹಾರಿಕಾ ಮತ್ತು ವಂತಿಕಾ ಅಗರವಾಲ್ ತಮ್ಮ ಎದುರಾಳಿಗಳನ್ನು ಸೋಲಿಸಿದರೆ, ವೈಶಾಲಿ ರಮೇಶಬಾಬು ತಮ್ಮ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.