ಮೈಸೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ಶೈಕ್ಷಣಿಕ ದಾರಿ ತೋರುವ ಪ್ರಮುಖ ತಿರುವಾಗಿದೆ. ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲ ಸಿದ್ಧತೆ ನಡೆಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನಡೆದ ಅಧಿಕಾರಿ ಸಭೆಯಲ್ಲಿ ಮಾತನಾಡಿ, ‘ಪರೀಕ್ಷೆ ನಡೆಸುವಾಗ ಲೋಪಗಳು ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಪಾರದರ್ಶಕವಾಗಿ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿ ನಡೆಸಬೇಕು’ ಎಂದು ಸೂಚಿಸಿದರು.
‘ನಕಲು ನಡೆಸದಂತೆ ಎಚ್ಚರವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಸ್ಥೆ ಮತ್ತು ಅಕ್ರಮ ಕಂಡು ಬಂದರೆ ಕೇಂದ್ರದ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
‘ಕೇಂದ್ರಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವಾಗಲೂ ಅಧಿಕಾರಿಗಳೂ ಸಹ ಮೊಬೈಲ್ ಫೋನ್ ಹೊರಗಿಟ್ಟು ಬರುತ್ತೇವೆ’ ಎಂದರು.
‘ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ, ಆತಂಕ ಕಾಡುತ್ತದೆ. ಆದ್ದರಿಂದ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಿ ಆತ್ಮವಿಶ್ವಾಸ ತುಂಬಬೇಕು. ಪರೀಕ್ಷೆಗೆ ಗೈರಾಗದಂತೆ ನೋಡಿಕೊಳ್ಳಬೇಕು. ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿದ್ದು, ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಪರೀಕ್ಷಾ ಸಿಬ್ಬಂದಿ ಸಂವೇದನಾಶೀಲರಾಗಿ ವರ್ತಿಸಬೇಕು’ ಎಂದು ಸಲಹೆ ನೀಡಿದರು.
‘ಕೇಂದ್ರಕ್ಕೆ ಬರಲು ತೊಂದರೆ ಇರುವ ಮಕ್ಕಳಿಗೆ ಮಾತೃ ಹೃದಯದಿಂದ ವರ್ತಿಸಬೇಕು. ಹಾಸ್ಟೆಲ್ ವ್ಯವಸ್ಥೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಪ್ರವೇಶ ಪತ್ರ ತೋರಿಸಿದರೆ ಉಚಿತ ಪ್ರಯಾಣ ಮಾಡಬಹುದು. ಬಸ್ ಕೊರತೆಯಾಗದಂತೆ ಎಚ್ಚರವಹಿಸಬೇಕು’ ಎಂದರು.
ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾತನಾಡಿ, ‘ಅಂಗವಿಕಲ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೆಲಮಹಡಿಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಶಿಕ್ಷಕರ ಕೊರತೆ ಕಂಡು ಬಂದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ, ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.