ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | 27ಕ್ಕೆ ಎಸ್ಕಾಂ ಕಚೇರಿ ಮುಂದೆ ರಾಜ್ಯ ರೈತ ಸಂಘ ಪ್ರತಿಭಟನೆ

ವಿದ್ಯುತ್‌ ನಿಗಮ ಖಾಸಗೀಕರಣ ಕಾಯ್ದೆಗೆ ರಾಜ್ಯ ರೈತ ಸಂಘ ವಿರೋಧ
Last Updated 17 ಮಾರ್ಚ್ 2023, 7:38 IST
ಅಕ್ಷರ ಗಾತ್ರ

ಮೈಸೂರು: ‘ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ವಿದ್ಯುತ್‌ ನಿಗಮಗಳ ಖಾಸಗೀಕರಣ ಮಾಡಲು ಹೊಸ ಕಾಯ್ದೆ ಮೂಲಕ ಸಜ್ಜಾಗಿದೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮಾರ್ಚ್‌ 27ರಂದು ಕೆಪಿಟಿಸಿಎಲ್‌ನ ಎಲ್ಲ 4 ಎಸ್ಕಾಂ ಕಚೇರಿಗಳ ಮುಂದೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ’ ಎಂದು ರಾಜ್ಯ ಸಮಿತಿ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕಾರಿಣಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹೊಸ ನೀತಿ ರೈತರಿಗಷ್ಟೇ ಅಲ್ಲ, ಸಾಮಾನ್ಯ ಜನರಿಗೂ ಕಂಟಕವಾಗಲಿದೆ. ವಿದ್ಯುತ್‌ ಪೂರೈಕೆ ಹಾಗೂ ಸರಬರಾಜು, ಶುಲ್ಕ ಆಕರಣೆ ವ್ಯವಸ್ಥೆ ಖಾಸಗಿ ಕಾರ್ಪೊರೇಟ್‌ ಕಂಪನಿಗಳ ವಶವಾಗಲಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈಗ ಸಮಸ್ಯೆಗಳ ಬಗ್ಗೆ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಸೆಸ್ಕ್‌ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಬಹುದು. ಪ್ರಜಾಪ್ರಭುತ್ವದ ಭಾಗವಾದ ಅಧಿಕಾರಿಗಳಲ್ಲಿ ಚರ್ಚಿಸಬಹುದು. ಆದರೆ, ಕೆಪಿಟಿಸಿಎಲ್‌ ಖಾಸಗಿ ಕಂಪನಿಗಳ ವಶವಾದರೆ ರೈತರು ಹಾಗೂ ಸಾಮಾನ್ಯ ಬಳಕೆದಾರರ ಅಳಲನ್ನು ಕೇಳುವವರಾರು’ ಎಂದು ಪ್ರಶ್ನಿಸಿದರು.

‘ಕಂಪನಿಗಳು ಸ್ಮಾರ್ಟ್‌ ಮೀಟರ್‌ ಅಳವಡಿಸಿದ ಬಳಿಕ ವಿದ್ಯುತ್‌ ದರ, ಸೇವಾ ಶುಲ್ಕ, ಇತರ ವಸೂಲಾತಿಗಳಿಂದಾಗಿ ಬಳಕೆದಾರರಿಗೆ ವಿದ್ಯುತ್‌ ದುಬಾರಿಯಾಗಲಿದೆ. ಕೃಷಿ ಬಳಕೆ ವಿದ್ಯುತ್‌ಗೂ ಸಮಸ್ಯೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

10 ತಾಸು ವಿದ್ಯುತ್‌ ಕೊಡಿ: ‘ರಾಜ್ಯದಲ್ಲಿ 40 ಲಕ್ಷ ಕಾನೂನುಬದ್ಧ ಪಂಪ್‌ ಸೆಟ್‌ಗಳನ್ನು ಹೊಂದಿದವರು ಅತಂತ್ರರಾಗಿದ್ದಾರೆ. ಹಣ ತುಂಬಿ ಸಕ್ರಮಗೊಳಿಸಿದವರಿಗೆ ಮೂಲಸೌಕರ್ಯವನ್ನು ನೀಡಿಲ್ಲ. ಗುಣಮಟ್ಟದ ವಿದ್ಯುತ್‌ 4 ತಾಸು ಮಾತ್ರ ಲಭಿಸುತ್ತಿದೆ. ಹಗಲು ವೇಳೆ 10 ತಾಸು ಗುಣಮಟ್ಟದ ವಿದ್ಯುತ್‌ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಮುಖರಾದ ಜೆ.ಎಂ.ವೀರಸಂಗಯ್ಯ, ನೂಲೆನೂರು ಎಂ. ಶಂಕರಪ್ಪ, ಮಂಜುಳಾ ಎಸ್‌. ಅಕ್ಕಿ, ನೇತ್ರಾವತಿ, ಪ್ರಸನ್ನ, ಶಿವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT