ಮೈಸೂರು: ‘ಮುಡಾದ ಹಿಂದಿನ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಪಡಿಸಿ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರವೇ ಹಗರಣದ ಬಗ್ಗೆ ಹೈಕೋರ್ಟ್‌ಗೆ ಮಹತ್ವದ ದಾಖಲೆ ಒದಗಿಸಿದೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಪ್ರತಿಪಾದಿಸಿದರು.
ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾವು ಆರಂಭದಿಂದ ಮಾಡಿರುವ ಆರೋಪಗಳನ್ನೇ ಪುಷ್ಟೀಕರಿಸಿ ಸರ್ಕಾರ ಅಮಾನತು ಮಾಡಿದೆ. ಆದರೆ ಡಿ.ಬಿ.ನಟೇಶ್ ಅವರನ್ನು ಇನ್ನೂ ಮುಟ್ಟಿಲ್ಲ. ಇಬ್ಬರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಸಿದ್ದರಾಮಯ್ಯ ಯಾವುದೇ ಸಭೆಗೆ ಬರುತ್ತಾರೆಂದರೆ ಅಧಿಕಾರಿಗಳು ಹೆದರುತ್ತಿದ್ದರು. ಆದರೆ ಈ ಇಬ್ಬರು ಅಧಿಕಾರಿಗಳು ಅವರನ್ನೇ ಹತೋಟಿಯಲ್ಲಿಟ್ಟಿರುವುದು ವಿಷಾದನೀಯ’ ಎಂದರು.
‘ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಇಲಾಖೆಯ ನಿರ್ವಹಣೆಯಲ್ಲಿ ವಿಫಲರಾಗಿರುವುದರಿಂದ ಮುಖ್ಯಮಂತ್ರಿಗೆ ಈ ಸ್ಥಿತಿ ಬಂದಿದೆ. ಅವರು ಜಿಲ್ಲಾಧಿಕಾರಿ ಪತ್ರಕ್ಕೆ ಸ್ಪಂದಿಸಲಿಲ್ಲ. ಆಯುಕ್ತರ ಕೆಲಸದ ಬಗ್ಗೆ ಆರೋಪ ಕೇಳಿಬಂದಾಗ ತರಾಟೆಗೆ ತೆಗೆದುಕೊಂಡಿಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿಯೇ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಮುಡಾದಲ್ಲಿ ನಿರ್ಣಯ ಕೈಗೊಳ್ಳದೆಯೇ ಮುಖ್ಯಮಂತ್ರಿ ಕುಟುಂಬಕ್ಕೆ ನಿವೇಶನಗಳ ಕ್ರಯಪತ್ರ ಮಾಡಿಕೊಡಲಾಗಿದೆ. ಆ ಕುರಿತ ದಾಖಲೆಗಳು ಹರಿದಾಡುತ್ತಿದ್ದು, ಹಿಂದಿನ ಆಯುಕ್ತರು ಹಾಗೂ ಅಧ್ಯಕ್ಷರನ್ನು ಹೊಣೆಗಾರರನ್ನಾಗಿಸಿ ತನಿಖೆ ನಡೆಸಬೇಕು. 1995ರ ನಂತರ ನಡೆದಿರುವ ನಿವೇಶನ ಹಂಚಿಕೆಯ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.
‘ಮುಖ್ಯಮಂತ್ರಿಯ ಜೊತೆಗಿರುವ ಹಿತಶತ್ರುಗಳು ತಮ್ಮ ಅಕ್ರಮ ಬಯಲಿಗೆ ಬರಬಾರದು ಎಂಬ ಕಾರಣಕ್ಕೆ 14 ನಿವೇಶನದ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಇಲಾಖೆಯು ಇಲ್ಲಿಯವರೆಗೆ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಿರುವ ಬಗ್ಗೆ ಆದೇಶವನ್ನೇ ನೀಡಿಲ್ಲ. ಬದಲಾಗಿ ನಾವು ಸುಳ್ಳು ದಾಖಲೆ ನೀಡುತ್ತಿದ್ದೇವೆ ಎಂದು ದೂರುತ್ತಿದ್ದಾರೆ. ಹಾಗಿದ್ದರೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಲಿ’ ಎಂದು ಸವಾಲೆಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.