ತಲಕಾಡು: ಎಲ್ಲಿ ನೋಡಿದರಲ್ಲಿ ಗುಂಡಿ, ಮಳೆ ಬಂದರೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ತಲಕಾಡಿನ ವೈದ್ಯನಾಥೇಶ್ವರ ಸ್ವಾಮಿ ಸಮೂಹ ದೇವಾಲಯಕ್ಕೆ ಹೋಗುವ ರಸ್ತೆಯ ಸ್ಥಿತಿಯಿದು.
ಹಳೇ ಬೀದಿಯ ಮುಖ್ಯರಸ್ತೆಯು ದಶಕಗಳಿಂದ ಅಭಿವೃದ್ಧಿ ಕಾಣದೆ ಹಳ್ಳಗಳಿಂದ ಕೂಡಿದ್ದು, ಮಳೆಗಾಲದಲ್ಲಿ ಜನ, ವಾಹನ ಸಂಚಾರ ಕಷ್ಟಕರವಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಗ್ರಾಮದ ಎಲ್ಲಾ ಬೀದಿಗಳಲ್ಲೂ ನೀರು ತುಂಬಿದ್ದು, ಶಾಲೆಗೆ ಹೋಗುವ ಮಕ್ಕಳು, ಪ್ರವಾಸಿಗರು ಹಳೇಬೀದಿಯ ಗುಂಡಿ ರಸ್ತೆಯಲ್ಲೇ ಪ್ರಯಾಸಪಟ್ಟು ಸಂಚರಿಸುವಂತಾಗಿದೆ.
ಹೊಸ ಬೀದಿ ಗ್ರಾಮದಲ್ಲಿರುವ ವೈಕುಂಠ ನಾರಾಯಣಸ್ವಾಮಿ ದೇವಾಲಯವಿರುವ ವಾಸ್ತು ಬೀದಿಯು ಅನೇಕ ವರ್ಷಗಳಿಂದ ಡಾಂಬರ್ ಕಾಣದೆ ರಸ್ತೆ, ಚರಂಡಿಗಳು ಹಾಳಾಗಿದ್ದು ನಿವಾಸಿಗಳು ಓಡಾದಂತ ಪರಿಸ್ಥಿತಿ ಎದುರಾಗಿದೆ.
ಹಳೆಬೀದಿಯ ಚರಂಡಿ ತ್ಯಾಜ್ಯ ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಡೆಂಗಿ, ಮಲೇರಿಯಾದಂತ ರೋಗಗಳಿಗೂ ಆಹ್ವಾನ ನೀಡುವಂತಿದೆ.
‘ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಪ್ರತಿನಿಧಿಸುವ ಕ್ಷೇತ್ರ. ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಅಭಿವೃದ್ಧಿ ಬಗ್ಗೆ ಹತ್ತು ವರ್ಷಗಳಿಂದ ಮನವಿ ಮಾಡಿದರೂ ಅಧಿಕಾರಿಗಳಿಂದ ಉತ್ತರ ಸಿಗುತ್ತಿಲ್ಲ. ರಸ್ತೆ ಸಮಸ್ಯೆಯಿಂದ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಶೀಘ್ರ ಅಭಿವೃದ್ಧಿಪಡಿಸಬೇಕು’ ಎಂದು ಹಳೇಬೀದಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸರಾವ್ ಆಗ್ರಹಿಸಿದರು.
‘ಆಗಸ್ಟ್ 15ರ ಬಳಿಕ ಹಳೇಬೀದಿಯ ಕಾವೇರಿ ನದಿ ನಿಸರ್ಗಧಾಮ ಹಾಗೂ ವೈದ್ಯನಾಥೇಶ್ವರ ಸಮೂಹ ದೇವಾಲಯಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಈಗಾಗಲೇ ರಸ್ತೆ ಅಭಿವೃದ್ಧಿಗೆ ಬೇಕಾಗುವ ಅನುದಾನ ಸರ್ಕಾರದಿಂದ ಮಂಜೂರಾಗಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಸತೀಶ್ ಚಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.