ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ನಗರ|ತೊಂದರೆ ಕೊಟ್ಟಲ್ಲಿ ನನ್ನ 2ನೇ ಮುಖ ನೋಡಬೇಕಾಗುತ್ತದೆ: ಸಾ.ರಾ.ಮಹೇಶ್ ಹೇಳಿಕೆ

ಕೃತಜ್ಞತಾ ಸಭೆಯಲ್ಲಿ ಸಾ.ರಾ.ಮಹೇಶ್ ಹೇಳಿಕೆ
Published 24 ಜೂನ್ 2023, 13:38 IST
Last Updated 24 ಜೂನ್ 2023, 13:38 IST
ಅಕ್ಷರ ಗಾತ್ರ

ಕೆ.ಆರ್.ನಗರ: ‘ಇಂದಿನ ನನ್ನ ಸೋಲಿಗೆ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಯಾರೂ ಕಾರಣರಲ್ಲ. ಶೇ 30ರಷ್ಟು ಮತದಾರರು ಎದುರಾಳಿ ಅಭ್ಯರ್ಥಿಗೆ ವಿಶಾಲವಾದ ಹೃದಯವಂತಿಕೆ ತೋರಿಸಿದ ಫಲವಾಗಿ ನನ್ನ ಸೋಲಾಯಿತು’ ಎಂದು ಜೆಡಿಎಸ್‌ ಮುಖಂಡ ಸಾ.ರಾ.ಮಹೇಶ್ ಹೇಳಿದರು.

ಇಲ್ಲಿನ ರೇಡಿಯೊ ಮೈದಾನದಲ್ಲಿ ಜೆಡಿಎಸ್ ವತಿಯಿಂದ ಶುಕ್ರವಾರ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ರಾಜಕಾರಣಿ ಅಲ್ಲ, ವಿದ್ಯಾರ್ಥಿ ದಿನದಿಂದಲೂ ಹೋರಾಟಗಾರ. ಅಧಿಕಾರದ ದರ್ಪದಲ್ಲಿ ಅಧಿಕಾರಿಗಳಿಂದಾಗಲೀ, ಮುಖಂಡರಿಂದಾಗಲೀ ನನ್ನ ನಿಷ್ಠಾವಂತ ಕಾರ್ಯಕರ್ತರಿಗೆ ಒಂದೇ ಒಂದು ನೋವು ಆದರೆ ಆವತ್ತು ಸಾ.ರಾ.ಮಹೇಶ್‌ನ ಎರಡನೇ ಮುಖ ನೋಡಬೇಕಾಗುತ್ತದೆ. ಆ ಒಂದನ್ನು ಹೇಳಲಿಕ್ಕೆ ಕೆ.ಆರ್.ನಗರಕ್ಕೆ ಬಂದಿದ್ದೇನೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ಸಾ.ರಾ.ಮಹೇಶ್ ನಿನ್ನ ಪಾಪದ ಕೊಡ ತುಂಬಿದೆ ಎಂದು ಹೇಳುತ್ತೀರಿ. ಹಾಗಾದರೆ ನೀವೂ ಹಲವು ಬಾರಿ ಸೋಲು ಅನುಭವಿಸಿದ್ದೀರಿ, ಮುಖ್ಯಮಂತ್ರಿಯಾಗಿದ್ದಾಗಲೂ ಸೋಲು ಅನುಭವಿಸಿದ್ದೀರಿ, ಆಗ ನಿಮಗೆ ಯಾವ ಪಾಪ ತುಂಬಿತ್ತು ಎಂದು ಪ್ರಶ್ನಿಸಿದ ಅವರು, ಆ ನಿಮ್ಮ ಸ್ಥಾನದಲ್ಲಿ ನಾನು ಇದ್ದಿದ್ದರೆ ಸ್ವಾಭಿಮಾನದಿಂದ ಆವತ್ತೇ ರಾಜಕೀಯ ನಿವೃತ್ತಿ ಹೊಂದುತ್ತಿದ್ದೆ’ ಎಂದು ಹೇಳಿದರು.

‘ವಿಶಾಲ ಹೃದಯ ಹೊಂದಿರುವ ಒಕ್ಕಲಿಗ ಸಮಾಜದವರು ನೂತನ ಶಾಸಕರಿಗೆ ಸನ್ಮಾನ ಮಾಡಿರುವುದು ಸಂತೋಷ. ಆದರೆ, ನಾನು ಮೂರು ಬಾರಿ ಶಾಸಕನಾಗಿದ್ದಾಗ, ಮಂತ್ರಿಯಾಗಿದ್ದಾಗ ನಿಮಗೆ ಯಾಕೆ ಆ ವಿಶಾಲ ಹೃದಯಂತಿಕೆ ಬರಲಿಲ್ಲ’ ಎಂದು ಪ್ರಶ್ನಿಸಿದರು.

‘ಹೆಚ್ಚಿನ ಅನುದಾನ ಸಿಗಲಿ ಎನ್ನುವ ಒಂದೇ ಉದ್ದೇಶದಿಂದ ಸಾಲಿಗ್ರಾಮ ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಯಿತು. ಕೃಷ್ಣರಾಜನಗರ ಪುಣ್ಯ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. 19 ವರ್ಷಗಳ ನನ್ನ ಸೇವಾ ಅವಧಿಯಲ್ಲಿ ನನ್ನ ವೈಯಕ್ತಿಕ ಜೀವನಕ್ಕಾಗಿ ಯಾರ ಬಳಿಯೂ ಐದು ರೂಪಾಯಿಗೆ ಕೈ ಚಾಚಿಲ್ಲ’ ಎಂದು ಹೇಳಿದರು.

‘ಕ್ಷೇತ್ರದಲ್ಲಿನ ಸಂಘಟನೆ ನನ್ನ ನೇತೃತ್ವದಲ್ಲಿಯೇ ನಡೆಯುತ್ತದೆ. ನಾನು ಬದುಕಿರುವ ತನಕ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಯಲ್ಲಿ, ಜೆಡಿಎಸ್ ಕಾರ್ಯಕರ್ತನಾಗಿ ಇರುತ್ತೇನೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಉಮೇಶ್, ತೋಂಟದಾರ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಹಂಪಾಪುರ ಕುಮಾರ್, ವಕ್ತಾರ ಕೆ.ಎಲ್.ರಮೇಶ್, ರುದ್ರೇಶ್, ಚಿಕ್ಕವೀರು, ಹರ್ಷಿತ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT