ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನಕಾರ ಸಂಕೋಲೆ ಬಿಡಿಸಿಕೊಳ್ಳುವುದೇ ಸವಾಲು: ಬಂಜಗೆರೆ ಜಯಪ್ರಕಾಶ್‌

ನಿಷ್ಪಕ್ಷಪಾತ ಅಧ್ಯಯನ ಇಂದಿನ ಅಗತ್ಯ: ಬಂಜಗೆರೆ ಜಯಪ್ರಕಾಶ್‌
Published 10 ಸೆಪ್ಟೆಂಬರ್ 2023, 5:01 IST
Last Updated 10 ಸೆಪ್ಟೆಂಬರ್ 2023, 5:01 IST
ಅಕ್ಷರ ಗಾತ್ರ

ಮೈಸೂರು: ‘ಸಾಂಸ್ಕೃತಿಕ ಸಂಕೋಲೆ, ಕಣ್ಣುಪಟ್ಟಿ ಬಿಡಿಸಿಕೊಳ್ಳುವುದೇ ಇಂದಿನ ಅಧ್ಯಯನಕಾರರ ಮುಂದಿರುವ ದೊಡ್ಡ ಸವಾಲು. ಆ ಕಣ್ಣುಪಟ್ಟಿ ಮೇಲುಗಡೆ ಇರುವುದನ್ನು ಮಾತ್ರ ತೋರಿಸುತ್ತದೆ, ಆದರೆ ಚರಿತ್ರೆ ನಡೆದಿರೋದು ನೆಲಮಟ್ಟದಲ್ಲಿ. ಆ ಚರಿತ್ರೆಯನ್ನು ಕಟ್ಟಿದವರು ಕೂಲಿಯಾಳುಗಳು, ಕಾಲಾಳುಗಳು. ಆ ಶ್ರಮ ಆಧರಿಸಿ ರಾಜರು ಸಾಮ್ರಾಜ್ಯ ಕಟ್ಟಿದರು’ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನ್‌ರಾಂ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ, ಮಾತಂಗ ನೌಕರರ ಕ್ಷೇಮಾಭಿವೃದ್ಧಿ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಅರಸರ ಸಾಂಸ್ಕೃತಿಕ ನೋಟ ಹಾಗೂ ಅರಸು ಕುರನ್ಗರಾಯನ ಸಂಸ್ಕೃತಿ ಮತ್ತು ಚಾರಿತ್ರಿಕ ನೆಲೆಗಳು ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮಾದಿಗ ಸಮುದಯಕ್ಕೆ ಸೇರಿದ ಅರಸು ಕುರನ್ಗರಾಯನ ಹತ್ತಿಪ್ಪತ್ತು ಹಳ್ಳಿಯ ಪಾಳೆಗಾರನಾಗಿದ್ದಿರಬಹುದು. ಆತನ ಮರೆಯಾದ ಇತಿಹಾಸವನ್ನು ಬೆಳಕಿಗೆ ತರಲು ಅದೇ ಸಮುದಾಯದ ಯುವಕನೊಬ್ಬ ಅಧ್ಯಯನ ಮಾಡಬೇಕಾಗುತ್ತದೆ, ಇದು ಜಾತಿ ಸಾಂಸ್ಕೃತಿಕ ರಾಜಕಾರಣದ ವಿಪರ್ಯಾಸ. ಅದನ್ನೇ ಜಾತಿ ಕಾರಣದ ರಾಜಕಾರಣ ಎನ್ನುವುದು ಎಂದರು.

ಅದೇ ರೀತಿಯಲ್ಲಿ ತಳಸಮುದಾಯಕ್ಕೆ ಸೇರಿದ ನೂರಾರು ಮಂದಿ ಪಾಳೆಪಟ್ಟುಗಾರರನ್ನು ಚರಿತ್ರೆಯಿಂದ ಮರೆಸಿ ಮರೆಗೆ ತಳ್ಳಲಾಗಿದೆ ಎಂದು ಹೇಳಿದರು.

ಬ್ರಿಟಿಷ್‌ ಆಳ್ವಿಕೆಗೆ ಬಂದು, ಬ್ರಿಟಿಷ್ ಸಂಶೋಧಕರು ಸಂಶೋಧನೆ ಮಾಡುವ ವರೆಗೂ ಭಾರತದ ಇತಿಹಾಸವನ್ನು ಗುಪ್ತರ ಕಾಲದಿಂದ ಗುರುತಿಸಲಾಗುತ್ತಿತ್ತು. ಅದಕ್ಕೂ ಐದಾರು ಶತಮಾನಗಳ ಹಿಂದೆಯೇ ಅಶೋಕ ಸಾಮ್ರಾಜ್ಯ ಕಟ್ಟಿದ್ದ ಎಂದು ಆ ನಂತರ ನಿರೂಪಿಸಲಾಯಿತು. ಇಂತಹ ನಿಷ್ಪಕ್ಷಪಾತ ಅಧ್ಯಯನ ಇಂದಿನ ಅಗತ್ಯ.

ನಿಷ್ಪಕ್ಷಪಾತ ಎಂದರೆ ಧಾರ್ಮಿಕ ಹಾಗೂ ಜಾತಿ ಭಾವನೆಗೆ ಪಕ್ಕಾಗದೇ ಇರುವುದು. ಜಾತಿ ಭಾವನೆ ಎನ್ನುವುದು ಆಳವಾಗಿರುವಂತದ್ದು, ಅದು ಸಾಂಸ್ಕೃತಿಕ ಕ್ಷೇತ್ರವನ್ನು ಪ್ರಭಾವಿಸಿದೆ. ಮಹತ್ಮರ ಜೀವನ ಚರಿತ್ರೆಯ ತಿದ್ದಿ ಬರೆದು ಮರು ನಿರೂಪಿಸಲಾಗಿದೆ. ಕೊಡುಗೆ ಕೊಟ್ಟವರ ಹೆಸರು ಮರೆಸಲಾಗಿದೆ ಎಂದರು.

ಮಹಿಷನ ಇತಿಹಾಸವೂ ಅದನ್ನೇ ಹೇಳುತ್ತದೆ. ಬೆಟ್ಟದ ಮೇಲೆ ಮಹಿಷನ ಮೂರ್ತಿ ಇದೆ, ಪ್ರತೀತಿಯೂ ಇದೆ. ಆದರೆ ಅವನು ಸೋಲಿಸ್ಪಟ್ಟ ದೊರೆಯಾಗಿದ್ದಾನೆ. ಸೋಲಿಸಲ್ಪಟ್ಟ ಕಾರಣಕ್ಕೆ ಅವನು ದುರುಳನಾಗಿದ್ದ, ಹಿಂಸಕನಾಗಿದ್ದ ಎಂದು ಬಿಂಬಿಸಲಾಗಿದೆ. ಚಾಮುಂಡಿ ನಾಡದೇವಿಯೇ ಸರಿ, ಆದರೆ ಮಹಿಷಾ ನಾಡದೇವನಲ್ಲವೇ ಎಂದು ಪ್ರಶ್ನಿಸಿದರು.

ಇತಿಹಾಸ ತಜ್ಞ ಪ್ರೊ. ಕೆ. ಸದಾಶಿವ ದಿಕ್ಸೂಚಿ ಭಾಷಣ ಮಾಡಿದರು. ಅರಸು ಕುರನ್ಗರಾಯನ ಹೆಜ್ಜೆಗಳು ವಿಷಯ ಕುರಿತು ಡಾ. ರವಿಕುಮಾರ್ ನೀಹ ಮಾತನಾಡಿದರು. ಡಾ. ಬಾಬು ಜಗಜೀವನ್‌ರಾಂ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ. ಆರ್‌. ತಿಮ್ಮರಾಯಪ್ಪ, ಮಾತಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೇತನ್‌ ಇದ್ದರು.

ಎಲ್ಲ ಚರಿತ್ರೆಯ ಹಿಂದೆ ಅಜ್ಞಾತ ಚರಿತ್ರೆ ಇದೆ. ಆದರೆ ಅದನ್ನು ದಾಖಲಿಸದೆ ಹಿಂದೆ ಸರಿಸಲಾಗಿದೆ ಬಂಜಗೆರೆ

-ಜಯಪ್ರಕಾಶ್‌ ಸಂಸ್ಕೃತಿ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT