ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಕಳವಾದ ಚಿನ್ನಾಭರಣ ಪಡೆದ ಕಾನ್‌ಸ್ಟೇಬಲ್

Published : 6 ಸೆಪ್ಟೆಂಬರ್ 2024, 5:17 IST
Last Updated : 6 ಸೆಪ್ಟೆಂಬರ್ 2024, 5:17 IST
ಫಾಲೋ ಮಾಡಿ
Comments

ಮೈಸೂರು: ನಗರದ ಅಶೋಕಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜು ವಿರುದ್ಧ ಕಳ್ಳರಿಂದ 300 ಗ್ರಾಂ ಚಿನ್ನಾಭರಣ ಪಡೆದ ಆರೋಪ ಕೇಳಿ ಬಂದಿದ್ದು, ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವೊಂದರಲ್ಲಿ ನಜರುಲ್ಲಾ ಬಾಬು ಹಾಗೂ ಅಲೀಂ ವಶಪಡಿಸಲಾಗಿತ್ತು. ವಿಚಾರಣೆ ವೇಳೆ ಅವರು ದೇವರಾಜ, ಶ್ರೀರಂಗಪಟ್ಟಣ ಮುಂತಾದ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

‘ನಾವು ಸುಮಾರು 400 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದು, ಅದರಲ್ಲಿ 300 ಗ್ರಾಂ ಚಿನ್ನಾಭರಣವನ್ನು ಮುಖ್ಯಪೇದೆ ರಾಜು ಪಡೆದಿದ್ದಾರೆ’ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಡಿಸಿಪಿಗಳಾದ ಎಂ.ಮುತ್ತುರಾಜ್ ಮತ್ತು ಜಾಹ್ನವಿ ಗಮನಕ್ಕೆ ತಂದಿದ್ದು, ಅವರ ಆದೇಶದಂತೆ ರಾಜು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳರಿಂದ ಚಿನ್ನಾಭರಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

‘ರಾಜು ಈ ಹಿಂದೆ ಹಲವು ಪ್ರಕರಣಗಳಲ್ಲಿ ಶಾಮೀಲಾದ ಹಾಗೂ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ತನಿಖೆ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ರಾಜು ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ್ದು, ವಿಚಾರಣೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.

ರಸ್ತೆ ಅಪಘಾತ: ಇಬ್ಬರು ಸಾವು

ಮೈಸೂರು ನಗರದಲ್ಲಿ ಗುರುವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ನಂಜನಗೂಡು ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಕಾಮತ್ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೂರು ನಿವಾಸಿ ಸುಷ್ಮಾರಾಜ್ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಷ್ಮಾರಾಜ್ ತಮ್ಮ ಸ್ನೇಹಿತ ಮೈಸೂರು ತಾಲ್ಲೂಕಿನ ದೂರ ಗ್ರಾಮದ ನಿವಾಸಿ ಡಿ.ಪಿ.ಸುಜನ್ ಅವರೊಂದಿಗೆ ಗುರುವಾರ ಮುಂಜಾನೆ ಕಾರಿನಲ್ಲಿ ತೆರಳಿದ್ದರು.

ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ನಗರದ ಲಿಂಗಾಂಬುದಿಪಾಳ್ಯ ಪ್ರೀತಿ ಬಡಾವಣೆ ನಿವಾಸಿ ಮನೋಜ್‌ ಕುಮಾರ್ (50) ಮೃತಪಟ್ಟಿದ್ದಾರೆ.

ನಗರದ ಶ್ರೀರಾಂಪುರ ಎರಡನೇ ಹಂತದ ಕಂದಾಯ ಬಡಾವಣೆಯ ಬಳಿ ಬುಧವಾರ ಬೆಳಿಗ್ಗೆ ಮನೋಜ್‌ ಕುಮಾರ್ ಬೈಕ್‌ಗೆ ಸಂಭವಿಸಿ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿ್ತು. ಎರಡೂ ಘಟನೆಯ ಬಗ್ಗೆ ಕೆ.ಆರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT