ಮೈಸೂರು: ಆಸ್ಪತ್ರೆಯ ಗೋಡೆಯ ಬಳಿ ನಿದ್ರಿಸುತ್ತಿರುವ ಯುವಕ, ಕಲ್ಲುಹಾಸಿನಲ್ಲಿ ಮುದುಡಿ ಮಲಗಿರುವ ವೃದ್ಧ, ಚೆಲುವಾಂಬ ಆಸ್ಪತ್ರೆಯ ಮುಂಭಾಗದ ಮರದ ನೆರಳಿನ ನಡುವೆ ವಿಶ್ರಾಂತಿ ಪಡೆಯುತ್ತಿರುವ ಮಹಿಳೆ.
– ಇದು ಕೆ.ಆರ್ ಆಸ್ಪತ್ರೆಯ ಇನ್ನೊಂದು ಮುಖ.
ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ದೂರದ ಊರುಗಳಿಂದ ವಿವಿಧ ಕಾಯಿಲೆಗಳಿರುವ ರೋಗಿಗಳು ಬಂದಾಗ ವೈದ್ಯರು ಸಿಗುವವರೆಗೆ ವಿರಮಿಸಲು ಇಲ್ಲಿ ಸರಿಯಾದ ಜಾಗವಿಲ್ಲ. ಅವರೆಲ್ಲಾ ಆಸ್ಪತ್ರೆಯ ಒಳಗೆ, ಹೊರಗೆ ಹಾಕಿರುವ ಹಾಸುಕಲ್ಲಿನಲ್ಲೇ ಒರಗಿ ವಿಶ್ರಾಂತಿ ಪಡೆಯುವುದು ಅನಿವಾರ್ಯವಾದ ಸ್ಥಿತಿ.
ಆವರಣದ ಸುತ್ತ ಒಮ್ಮೆ ಓಡಾಡಿದರೆ, ಔಷಧಿಗಾಗಿ ಬಂದು ವೈದ್ಯರನ್ನು ಕಾಯುತ್ತಿರುವವರು, ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಕರನ್ನು ವಿಚಾರಿಸಲು ಬಂದಿರುವವರು ಇಲ್ಲಿನ ಉದ್ಯಾನ ಹಾಗೂ ಖಾಲಿ ಜಾಗದಲ್ಲಿ ಕುಳಿತಿರುವುದು ಕಾಣ ಸಿಗುತ್ತದೆ.
ಕಿಲೋ ಮೀಟರ್‌ಗಟ್ಟಲೇ ದೂರದಿಂದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಬರುವವ ಹೊರರೋಗಿಗಳು ಆಸ್ಪತ್ರೆಯ ಬಳಿಗೆ ಬಂದಾಗ ಬಸವಳಿದಿರುತ್ತಾರೆ. ಆದರೆ ವಿಶ್ರಾಂತಿಗಾಗಿ ಇಲ್ಲಿ ಪ್ರತ್ಯೇಕ ಕೋಣೆಗಳಿಲ್ಲ. ಹೀಗಾಗಿ ಸುತ್ತಲೂ ಇರುವ ಮರದ ನೆರಳಿನ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ.
‘ನಾನು ನಂಜನಗೂಡಿನಿಂದ ಬಂದಿದ್ದೇನೆ. ಬೆಳಿಗ್ಗೆ ಹೊರಡುವಾಗ ಜ್ವರ ಇತ್ತು. ಈಗ ಜೋರಾಗಿದೆ. ಇಲ್ಲಿ ಪರೀಕ್ಷೆಗಾಗಿ ವೈದ್ಯರನ್ನು ಕಾಯುತ್ತಿದ್ದೇನೆ. ನೋವಿನಿಂದ ತಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಹೊತ್ತು ಆರಾಮವಾದ ಬಳಿಕ ವೈದ್ಯರಲ್ಲಿಗೆ ತೆರಳುತ್ತೇನೆ’ ಎಂದು ಪಾರ್ವತಮ್ಮ ಹೇಳಿದರು.
ಇವಿಷ್ಟು ಬೆಳಿಗ್ಗೆ ನಡೆಯುವ ವಿದ್ಯಾಮಾನವಾದರೆ, ಸೂರ್ಯ ಮರೆಯಾಗಿ ಕತ್ತಲಾಗುತ್ತಿದ್ದಂತೆ ಈ ಜಾಗದಲ್ಲಿ ಮದ್ಯವ್ಯಸನಿಗಳೂ ಕಾಣಸಿಗುತ್ತಾರೆ. ‘ಆವರಣದ ಒಳಗೆ ಪ್ರವೇಶಿಸಲು ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ಕುಡುಕರು ನೇರವಾಗಿ ಆಸ್ಪತ್ರೆ ಆವರಣದ ಸುತ್ತಲಿನ ಜನ ಕಡಿಮೆ ಇರುವ ಪ್ರದೇಶದಲ್ಲಿ ರಾತ್ರಿ ಕಳೆಯುತ್ತಾರೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
‘ಬೆಡ್‌ಗಳು ಖಾಲಿ ಇಲ್ಲ ಅಂದರೂ ರೋಗಿಗಳು ಅವನ್ನು ಕೇಳಿಸಿಕೊಳ್ಳುವುದಿಲ್ಲ. ಆಸ್ಪತ್ರೆಯ ಹೊರಾಂಗಣದಲ್ಲೇ ಮಲಗುತ್ತಾರೆ. ವಿಶ್ರಾಂತಿ ಕೊಠಡಿ ಇದ್ದರೆ ಅವರಿಗೂ ಸಹಾಯವಾಗಬಹುದು’ ಎಂದು ಹೇಳಿದರು.
ನಿತ್ಯ ನೂರಾರು ಮಂದಿ ಸಾರ್ವಜನಿಕರು ಈ ‘ದೊಡ್ಡಾಸ್ಪತ್ರೆ’ಯ ಕಡೆ ಮುಖ ಮಾಡುತ್ತಾರೆ. ರೋಗಿಗಳು ದಾಖಲಾಗಿರುವ ವಾರ್ಡ್‌ಗಳಿಗೂ ಎಲ್ಲರಿಗೂ ತೆರಳಲು ಅವಕಾಶ ಇರುವುದಿಲ್ಲ, ಹೀಗಾಗಿ ಅವರನ್ನು ನೋಡಲು ಬರುವವರಿಗೆ ಹಾಗೂ ಹೊರ ರೋಗಿಗಳಿಗೆ ‘ವಿಶ್ರಾಂತಿ ಕೊಠಡಿ’ಯ ಅವಶ್ಯಕತೆ ಇದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.