ತಿ.ನರಸೀಪುರ: ಕಬ್ಬಿನ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಉಪ ಕಚೇರಿಗೆ ಬೀಗ ಹಾಕಿ ಕಬ್ಬು ಬೆಳೆಗಾರರ ಸಂಘದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಜನವರಿ ತಿಂಗಳಲ್ಲಿ ಬೆಂಗಳೂರು ಸ್ವತಂತ್ರ ಉದ್ಯಾನದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 39 ದಿನಗಳ ಹೋರಾಟದ ಫಲವಾಗಿ ಅಹೋರಾತ್ರಿ ಧರಣಿ ಮಾಡಿದ ಪ್ರಯುಕ್ತ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹ 150 ಹೆಚ್ಚುವರಿ ಹಣ ಘೋಷಣೆ ಮಾಡಿ ಆದೇಶ ಮಾಡಿದೆ.
ಆದರೆ ಸರ್ಕಾರ ನಿಗದಿ ಪಡಿಸಿದ ಹೆಚ್ಚುವರಿ ಬಾಕಿ ಹಣವನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆ ಇದುವರೆಗೂ ಕಬ್ಬು ಸರಬರಾಜು ಮಾಡಿದ ರೈತರಿಗೆ ಕೊಡದೆ, ಕಬ್ಬು ಬೆಳೆದ ರೈತರಿಗೆ ಅನ್ಯಾಯ ಮಾಡುತ್ತಿದೆ. ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕೋರ್ಟ್ ಮೂಲಕ ತಡೆಯಾಜ್ಞೆ ತರುವುದರ ಮೂಲಕ ರೈತರನ್ನು ವಂಚಿಸುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಎರಡು ದಿನದ ಹಿಂದೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕರಾದ ವೇಲುಸ್ವಾಮಿ ಕಬ್ಬಿನ ಬಾಕಿ ಹಣ ಕೊಡುವ ವಿಷಯದ ಪ್ರಕರಣ ನ್ಯಾಯಾಲಯದಲ್ಲಿವುದರಿಂದ ರೈತರಿಗೆ ಬಾಕಿ ಹಣ ಕೊಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ತಿಳಿಸಿದಾಗ ಅದಕ್ಕೆ ರಾಜ್ಯ ಕಬ್ಬು ಬೆಳಗಾರ ಸಂಘದ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿ ಕಳೆದ ವರ್ಷದ ಬಾಕಿ ₹ 150 ಕೊಡುವ ತನಕ ಕಾರ್ಖಾನೆಯನ್ನು ಪ್ರಾರಂಭಿಸಬಾರದು ಎಂದು ತಿಳಿಸಿ ಅದರ ಪ್ರಕಾರ ಮೈಸೂರು ಜಿಲ್ಲೆಯಾದ್ಯಂತ ಸಕ್ಕರೆ ಕಾರ್ಖಾನೆ ಉಪ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟಿಸುತ್ತಿರುವುದಾಗಿ ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ತಿಳಿಸಿದರು.
ಬಾಕಿ ಹಣ ಕೊಡುವ ತನಕ ಕಚೇರಿಯ ಬಾಗಿಲು ತೆರೆಯದಂತೆ ತಾಕೀತು ಮಾಡಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅಲ್ಲಿನ ಅಧಿಕಾರಿಗಳಿಗೆ ತಿಳಿಸಿ ಪ್ರತಿಭಟನೆಯ ಮೂಲಕ ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಕುರುಬರು ಸಿದ್ದೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಿರಗಸೂರು ಶಂಕರ್, ಟೌನ್ ಅಧ್ಯಕ್ಷ ಅಪ್ಪಣ್ಣ, ಬೆಟ್ಟಳ್ಳಿ ನಂಜುಂಡಸ್ವಾಮಿ, ಬಿ.ಪಿ.ರಾಜೇಶ್, ಪರಶಿವಮೂರ್ತಿ, ಯೋಗೇಶ್, ಉಮೇಶ, ಕೆ.ಜಿ.ಗುರುಸ್ವಾಮಿ, ನಾಗೇಂದ್ರ ಲಿಂಗರಾಜ್, ಮಹೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.