ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಯಾರೊಂದಿಗೂ ಒಳ ಒಪ್ಪಂದವಿಲ್ಲ: ಅಶ್ವತ್ಥನಾರಾಯಣ

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿ
Last Updated 28 ಜನವರಿ 2023, 12:27 IST
ಅಕ್ಷರ ಗಾತ್ರ

ಮೈಸೂರು: ‘ಚುನಾವಣೆಯಲ್ಲಿ ಬಿಜೆಪಿಯು ಯಾರೊಂದಿಗೂ, ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಯಾರ ಜೊತೆಯೂ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ. ಮತ್ತೆ ಅಧಿಕಾರ ಹಿಡಿಯುವುದೇ ನಮ್ಮ ಗುರಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಬಿಜೆಪಿಗೆ ಸಮಾನ ಶತ್ರುಗಳು’ ಎಂದರು.

‘ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಬಿಜೆಪಿ ಸೇರಿದರೆ ಸ್ವಾಗತಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾರ ಮನೆಯನ್ನೂ, ಯಾರ ಗೇಟನ್ನೂ ಕಾಯಬೇಕಿಲ್ಲ. ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ’ ಎಂದು ಹೇಳಿದರು.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಗ್ಗೆ ಲೇವಡಿ ಮಾಡಿದ ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟ ಸಚಿವರು, ‘ಕಾಂಗ್ರೆಸ್‌ನವರು ಖಾಲಿಯಾಗಿದ್ದಾರೆ. ಅವರಿಗೆ ಹೇಳಲು ಏನೂ ಇಲ್ಲ. ಅದಕ್ಕಾಗಿ ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಎಲ್ಲೆಡೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ. ಅದಕ್ಕಾಗಿಯೇ ಜನರು ಬೆಂಬಲಿಸುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಜೆಡಿಎಸ್‌ಗೆ ಮತ ನೀಡಿದರೆ ಪ್ರಯೋಜನವಿಲ್ಲ’ ಎಂದು ಹೇಳಿದರು.

‘ಮೋದಿ, ಅಮಿತ್ ಶಾ ಸಮರ್ಥರಿದ್ದಾರೆ. ಹೀಗಾಗಿ, ಅವರನ್ನು ಪದೇ ಪದೇ ಕರೆತರುತ್ತಿದ್ದೇವೆ. ಅವರನ್ನು ಸರಿಗಟ್ಟುವ ಸಮರ್ಥ ನಾಯಕರು ಕಾಂಗ್ರೆಸ್‌ನಲ್ಲಿಲ್ಲ’ ಎಂದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ಪ್ರತಾಪ ಸಿಂಹ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿ.ವಿಯಲ್ಲಿ ನಡೆದಿರುವ ಅಕ್ರಮದಲ್ಲಿ ನನ್ನದೇನೂ ಪಾತ್ರವಿಲ್ಲ. ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT