ಮೈಸೂರು: ‘ಉದ್ಯೋಗ ನೀಡಿದ ಮಾತ್ರಕ್ಕೆ ನಿರುದ್ಯೋಗ ಮರೆಯಾಗುವುದಿಲ್ಲ. ಸರ್ಕಾರ ಕಾರ್ಮಿಕರು ಉತ್ತಮ ಜೀವನ ನಡೆಸಲು ಬೇಕಾಗುವ ವೇತನ ದೊರೆಯುವಂತೆ ಮಾಡಬೇಕು’ ಎಂದು ಚಿಂತಕ ಬಿ.ಶ್ರೀಪಾದ ಭಟ್ ತಿಳಿಸಿದರು.
ವಿಮಾ ನಿಗಮ ನೌಕರರ ಸಂಘವು ಐಡಿಯಲ್ ಜಾವ ರೋಟರಿ ಶಾಲೆಯಲ್ಲಿ ‘ನಿರುದ್ಯೋಗ– ಹಲವು ಆಯಾಮಗಳು’ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ನಿರುದ್ಯೋಗವನ್ನು ಒಂದು ದೃಷ್ಟಿಕೋನದಿಂದ ಗಮನಿಸದೆ ಹಲವು ಆಯಾಮಗಳಲ್ಲಿ ನೋಡಿದಾಗ ಅದರ ಪರಿಣಾಮದ ಅರಿವಾಗುತ್ತದೆ. ಜಾಗತೀಕರಣದ ನೀತಿಗಳು ಬರುವ ಮುನ್ನ ದೇಶದಲ್ಲಿ ಹಸಿವಿನ ಕ್ಷಾಮವಿತ್ತು. ಆದರೆ, ಈಗ ಅಂತಹ ಹಸಿವಿನ ಕ್ಷಾಮವಿಲ್ಲ. ಬಡತನ, ಅಸಮಾನತೆ ಹೆಚ್ಚಾಗಿದೆ’ ಎಂದು ತಿಳಿಸಿದರು.
‘ಜಾಗತೀಕರಣದ ನೀತಿಗಳಿಂದ ದೇಶದ ಜನ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಇದರಿಂದ ಅಭಿವೃದ್ಧಿ ಸೂಚ್ಯಂಕ ಹೆಚ್ಚುತ್ತಿರಬಹುದು. ಆದರೆ, ನಿರುದ್ಯೋಗದ ಪ್ರಮಾಣ, ಹಸಿವಿನ ಸೂಚ್ಯಂಕ ಹೆಚ್ಚಾಗಿದೆ’ ಎಂದರು.
‘ಇಂದಿರಾ ಗಾಂಧಿ ತಂದ ಬ್ಯಾಂಕ್‌ಗಳ ರಾಷ್ಟ್ರೀಕರಣ, ಭೂ ಸುಧಾರಣೆ ಯೋಜನೆ, ಕೇರಳ, ಕರ್ನಾಟಕದಲ್ಲಿ ಜಾರಿಯಾದ ಭೂ ಸುಧಾರಣೆ ಯೋಜನೆಗಳು ಅತ್ಯಂತ ಮಹತ್ವವಾದವು. ಜಾಗತೀಕರಣದ ನಂತರ ಇಂತಹ ನೀತಿಗಳನ್ನು ಯಾವುದೇ ಸರ್ಕಾರಗಳು ತಂದಿಲ್ಲ. ನಿರುದ್ಯೋಗ ನಿವಾರಣೆಗೆ ಆದ್ಯತೆ ನೀಡುವ ಆಡಳಿತದ ಅಗತ್ಯವಿದೆ’ ಎಂದು ತಿಳಿಸಿದರು.
ವಿಮಾ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಜೆ.ಸುರೇಶ್, ವಿಮಾ ನಿಗಮ ನೌಕರರ ಸಂಘದ ಅಧ್ಯಕ್ಷ ಎಸ್.ಕೆ.ರಾಮು ವೇದಿಕೆಯಲ್ಲಿ ಇದ್ದರು.