ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹೇಳಿ ಜನರ ಮನ ಗೆಲ್ಲೋಣ: ಸತೀಶ ಜಾರಕಿಹೊಳಿ

Last Updated 31 ಮಾರ್ಚ್ 2023, 15:40 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿಯವರು ಸುಳ್ಳುಗಳಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ. ನಾವು ಸತ್ಯವನ್ನು ಹೇಳಿ ಅವರನ್ನು ಪಕ್ಷದತ್ತ ಸೆಳೆಯಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ನಡೆದ ನಗರ ಹಾಗೂ ಗ್ರಾಮಾಂತರ ಪರಿಶಿಷ್ಟ ಪಂಗಡ ವಿಭಾಗದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಹೆಚ್ಚಿನ ಕಾಳಜಿ ವಹಿಸಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿಸಿದರೆ ನಾವ್ಯಾರೂ ಪ್ರಚಾರಕ್ಕೆ ಬರುವ ಅಗತ್ಯವೇ ಇರುವುದಿಲ್ಲ. ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ನಿಟ್ಟಿನಲ್ಲಿ ಎಲ್ಲ ಘಟಕದವರಿಗೂ ತರಬೇತಿ ಕೊಡಬೇಕು’ ಎಂದು ಸಲಹೆ ನೀಡಿದರು.

‘ಮೀಸಲಾತಿ ಜಾರಿಗೆ ತಂದವರು ಯಾರು, ನಮ್ಮ ಸರ್ಕಾರವಿದ್ದಾಗ ಪರಿಶಿಷ್ಟರಿಗೆ ಜಾರಿಗೊಳಿಸಿದ್ದ ಯೋಜನೆಗಳೇನು? ಅವುಗಳನ್ನು ಈಗಿನ ಸರ್ಕಾರ ನಿಲ್ಲಿಸಿರುವುದು ಮೊದಲಾದವುಗಳನ್ನು ಜನರ ಗಮನಕ್ಕೆ ತರಬೇಕು. ಎದುರಾಳಿಗಳ ತಂತ್ರಕ್ಕೆ ಪ್ರತಿಯಾಗಿ ಕಾರ್ಯತಂತ್ರವನ್ನು ರೂಪಿಸಬೇಕು’ ಎಂದು ತಿಳಿಸಿದರು.

ಈಗಿನ ಸರ್ಕಾರ ನಿಲ್ಲಿಸಿದೆ: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹ 9ಸಾವಿರ ಕೋಟಿಯನ್ನು ಪರಿಶಿಷ್ಟರ ಅಭಿವೃದ್ಧಿಗೆಂದು ನೀಡಿದ್ದರು. ಇದನ್ನು ಜನರಿಗೆ ತಿಳಿಸಿಕೊಡಬೇಕು’ ಎಂದ ಅವರು, ‘ನಾವು ಮಾಡಿದ್ದ ‘ವಿದ್ಯಾಸಿರಿ’ ಮೊದಲಾದ ಯೋಜನೆಗಳನ್ನು ಈಗಿನ ಸರ್ಕಾರದವರು ನಿಲ್ಲಿಸಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಏನೇನು ಅನುಕೂಲ ಮಾಡಿಕೊಡುತ್ತೇವೆ ಎಂಬ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಜನರು ಶಕ್ತಿ ತುಂಬಬೇಕು. ನಮ್ಮ ಕನಸುಗಳನ್ನು ಮನೆ–ಮನೆಗಳಿಗೆ ಹೋಗಿ ತಿಳಿಸಿಕೊಟ್ಟು ಮನವರಿಕೆ ಮಾಡಿಕೊಡಬೇಕು. ನಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಡಲು ಬದ್ಧವಾಗಿದ್ದೇವೆ ಎನ್ನುವುದನ್ನು ತಿಳಿಸಿಕೊಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಮಾಡಿರುವ ಸಾಧನೆಗಳನ್ನು ನೆನಪಿಸಿಕೊಡಬೇಕು. ಇದನ್ನು ಮೊದಲು ಕಾರ್ಯಕರ್ತರು ತಿಳಿಸಿಕೊಳ್ಳಬೇಕು’ ಎಂದು ಹೇಳಿದರು.

‘ಪರಿಶಿಷ್ಟರ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎನ್ನುವುದನ್ನು ಮರೆಯಬಾರದು’ ಎಂದರು.

ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿ, ‘ಪಕ್ಷದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಕಾರ್ಯಕರ್ತರು ತಡೆಯಬೇಕು. ಮೀಸಲಾತಿಯ ವಿಚಾರದಲ್ಲಿ ಬಿಜೆಪಿಯು ಆಡುತ್ತಿರುವ ಕಣ್ಣಾಮುಚ್ಚಾಲೆ ಆಟವನ್ನು ತಿಳಿಸಿಕೊಡಬೇಕು. ನಾವೆಲ್ಲರೂ ಚೆನ್ನಾಗಿ ಬದುಕುಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎನ್ನುವುದನ್ನು ಎಲ್ಲ ವರ್ಗದವರಿಗೂ ತಿಳಿಸಿಕೊಡಬೇಕು. ಸಾಮಾಜಿಕ ನ್ಯಾಯದ ಪರವಾಗಿ ಇರುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ’ ಎಂದು ತಿಳಿಸಿದರು.

ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮುಖಂಡ ಮಾವಿನಹಳ್ಳಿ ಸಿದ್ದೇಗೌಡ, ಶಾಸಕ ಅನಿಲ್‌ ಚಿಕ್ಕಮಾದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ಪಕ್ಷದ ಲೋಕಸಭಾ ಕ್ಷೇತ್ರದ ಉಸ್ತುವಾರಿ ಎಂ.ಕೆ.ರಾಘವನ್, ಮುಖಂಡ ಎಂ.ಕೆ.ಸೋಮಶೇಖರ್ ಮಾತನಾಡಿದರು.

ರಾಜ್ಯ ಎಸ್‌ಟಿ ಘಟಕದ ಅಧ್ಯಕ್ಷ ಪಾಲಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜ್, ನಗರ ಎಸ್‌ಟಿ ಘಟಕದ ಅಧ್ಯಕ್ಷ ರೋಹಿತ್, ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಇದ್ದರು.

**

ಕಾರ್ಯಕರ್ತರು 40 ದಿನಗಳವರೆಗೆ ಬೇರೆ ಕೆಲಸ ಬಿಟ್ಟು ಪಕ್ಷಕ್ಕಾಗಿ ದುಡಿಯಬೇಕು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿಕೊಡಬೇಕು.
-ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

*
ಮೈಸೂರು ಜಿಲ್ಲೆಯಲ್ಲಿ ನಮಗೆ ಪ್ರಮುಖ ಎದುರಾಳಿಗಳು ಜೆಡಿಎಸ್‌ನವರು. ಆ ಪಕ್ಷದವರು ಪರಿಶಿಷ್ಟರ ಏಳಿಗೆಯನ್ನು ಎಂದಿಗೂ ಬಯಸುವುದಿಲ್ಲ.
-ಎಚ್‌.‍ಪಿ.ಮಂಜುನಾಥ್, ಶಾಸಕ, ಹುಣಸೂರು

*
ಜೆಡಿಎಸ್‌ನವರು ನಮ್ಮ ತಂದೆ ಚಿಕ್ಕಮಾದು ಅವರಿಗೆ ಬಹಳ ಅನ್ಯಾಯ ಮಾಡಿದರು. ಆದರೆ, ಈಗ ಎಸ್‌ಟಿ ಸಮಾಜದ ಮತಕ್ಕಾಗಿ ಅವರ ಫೋಟೊಗಳನ್ನು ಬಳಸಿಕೊಳ್ಳುತ್ತಿದ್ದಾರೆ.
-ಅನಿಲ್‌ ಚಿಕ್ಕಮಾದು, ಶಾಸಕ, ಎಚ್‌.ಡಿ.ಕೋಟೆ

*
ಜಿಲ್ಲೆಯಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಸಮೀಕ್ಷೆ ಪ್ರಕಾರ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಬಹುತೇಕರು ಹೇಳಿದ್ದಾರೆ.
-ಡಾ.ಬಿ.ಜೆ.ವಿಜಯ್‌ಕುಮಾರ್‌, ಅಧ್ಯಕ್ಷ, ಗ್ರಾಮಾಂತರ ಜಿಲ್ಲಾ ಘಟಕದ ಆಧ್ಯಕ್ಷ, ಕಾಂಗ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT