ಯಳಂದೂರು: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಅಧಿಕಾರದ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷ್ಮಿ (ಅಧ್ಯಕ್ಷೆ) ಹಾಗೂ ಶಾಂತಮ್ಮ (ಉಪಾಧ್ಯಕ್ಷೆ) ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ)ಗೆ ಮೀಸಲಾಗಿತ್ತು. ಒಟ್ಟು 11 ಸದಸ್ಯ ಬಲದ ಪಂಚಾಯಿತಿಯಲ್ಲಿ 2 ಅವಧಿಯಲ್ಲೂ ಮಹಿಳೆಯರೇ ಅಧಿಕಾರ ಹಿಡಿದರು.
ಪಂಚಾಯಿತಿಯಲ್ಲಿ 11 ವಾರ್ಡ್ ಇದ್ದು, 2020ರ ಮೇನಲ್ಲಿ ನಡೆದ ಚುನಾವಣೆಯಲ್ಲಿ 10 ಕಾಂಗ್ರೆಸ್ ಮತ್ತು ಒಬ್ಬರು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಪ್ರಸಕ್ತ ಸಾಲಿನಲ್ಲಿ ಒಬ್ಬ ಸದಸ್ಯ ಮರಣ ಹೊಂದಿದ್ದಾರೆ. 5 ಮಂದಿ ಮಹಿಳಾ ಸದಸ್ಯರು ಇದ್ದು ಮೊದಲ ಅವಧಿಯಲ್ಲಿ ಶಾಂತಮ್ಮ ಮತ್ತು ಪ್ರಭಾವತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಲಕ್ಷ್ಮಿ ಮುಂದುವರಿದಿದ್ದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಪಂಚಾಯಿತಿ ಅವಧಿ ಪೂರ್ಣಗೊಳ್ಳಲು ಇನ್ನೂ 11 ತಿಂಗಳು ಉಳಿದಿದೆ. ಕಾಂಗ್ರೆಸ್ ಪಕ್ಷದ ಸದಸ್ಯರೆ ಇದ್ದಾರೆ. ಈ ದೆಸೆಯಲ್ಲಿ ಸದಸ್ಯರು ಅವಿರೋಧ ಆಯ್ಕೆಗೆ ಮುಂದಾಗಿದ್ದಾರೆ. ಉತ್ತಮ ಆಡಳಿತ ನಡೆಸುವ ನಿಟ್ಟಿನಲ್ಲಿ ವಿಜೇತರು ಚಿಂತಿಸಬೇಕು’ ಎಂದರು.