ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ದಸರಾಕ್ಕೆ ವರ್ಣರಂಜಿತ ಚಾಲನೆ; ‘ಅಪ್ಪು’ಗೆ ಮೈಸೂರಿನ ಪ್ರೀತಿಯ ನಮನ

Last Updated 28 ಸೆಪ್ಟೆಂಬರ್ 2022, 17:04 IST
ಅಕ್ಷರ ಗಾತ್ರ

ಮೈಸೂರು: ಅಲ್ಲಿದ್ದ ವರ್ಣರಂಜಿತ ಪರದೆಗಳಲ್ಲೂ. ನೆರೆದಿದ್ದವರೆಲ್ಲರ ಮನದಲ್ಲೂ, ಅಲ್ಲಲ್ಲಿ ಗುಂಪುಗಳಾಗಿ ಅಭಿಮಾನಿಗಳು ಹಾರಾಡಿಸುತ್ತಿದ್ದ ಕನ್ನಡ ಬಾವುಟಗಳಲ್ಲೂ ಮತ್ತು ಫೋಟೊಗಳಲ್ಲೂ ಅಪ್ಪು ಇದ್ದರು. ಆ ವಾತಾವರಣದ ತುಂಬೆಲ್ಲವೂ ‘ಯುವರತ್ನ’ನ ನೆನಪು ಪಸರಿಸಿತು. ಎಲ್ಲವೂ ಪುನೀತ್‌ಮಯವಾಗತ್ತು. ‘ರಾಜಕುಮಾರ’ನನ್ನು ಸ್ಮರಿಸಿ ಭಾವುಕ ಕ್ಷಣಗಳಿಗೂ ಜನರು ಜಾರಿದರು.

–ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮೈಸೂರು ನಮನ ಸಲ್ಲಿಸಿದ್ದು ಹೀಗೆ.

ನಾಡಹಬ್ಬದ ಅಂಗವಾಗಿ ಯುವ ದಸರಾ ಉಪ ಸಮಿತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ‘ಯುವ ದಸರಾ’ ಉದ್ಘಾಟನೆಯಲ್ಲಿ ಪುನೀತನನ್ನು ವಿನೀತವಾಗಿ ನೆನೆದ ಸಾವಿರಾರು ಮಂದಿ ‘ಅಪ್ಪು, ಅಪ್ಪು, ಅಪ್ಪು, ಅಪ್ಪು’ ಎಂದು ಕೂಗುತ್ತಾ ಅಭಿಮಾನ ಪ್ರದರ್ಶಿಸಿದರು.

ಅಪ್ಪು ಹವಾ ಜೋರಾಗಿಯೇ ಇತ್ತು. ನಮನದೊಂದಿಗೆ ನೆಚ್ಚಿನ ನಟನನ್ನು ಸಂಭ್ರಮಿಸುವ ಕಾರ್ಯಕ್ರಮವೂ ಅದಾಯಿತು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾವಿರಾರು ಮಂದಿ ಸಾಕ್ಷಿಯಾದರು.

ಪುನೀತ್‌ ಪತ್ನಿ ಅಶ್ವಿನಿ, ಅಣ್ಣ ರಾಘವೇಂದ್ರ ರಾಜ್‌ಕುಮಾರ್‌, ಕುಟುಂಬದ ವಿನಯ್ ರಾಜ್‌ಕುಮಾರ್, ಧೀರನ್‌ ರಾಮ್‌ಕುಮಾರ್‌ ವೇದಿಕೆ ಏರುತ್ತಿದ್ದಂತೆಯೇ ‘ಅಪ್ಪು’ ಘೋಷಣೆ ಮುಗಿಲು ಮುಟ್ಟಿತು. ಕಾರ್ಯಕ್ರಮದುದ್ದಕ್ಕೂ ಮುಂದುವರಿಯಿತು. ಗಾಯಕರಾದ ವಿಜಯಪ್ರಕಾಶ್, ಕುನಾಲ್‌ ಗಾಂಜಾವಾಲಾ, ಅನುರಾಧಾ ಭಟ್, ಚೈತ್ರಾ ಅಪ್ಪು ಹಾಡಿದ ಹಾಗೂ ಅಭಿನಯಿಸಿದ ಹಾಡುಗಳ ಮೂಲಕ ಮೋಡಿ ಮಾಡಿದರು. ಯುವಜನರು ಹುಚ್ಚೆದ್ದು ಕುಣಿದು ಸಂಭ್ರಮದ ಹೊನಲಲ್ಲಿ ತೇಲಿದರು.

ವರ್ಣರಂಜಿತ ಚಾಲನೆ: ಪುನೀತ್‌ ಫೋಟೊಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಯುವ ದಸರಾ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ ದೊರೆಯಿತು. ಅಶ್ವಿನಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೊದಲಾದವರು ಉದ್ಘಾಟಿಸಿದರು. ನಂತರ ಅಲ್ಲಿ ಅಪ್ಪು ನೆನಪಿನ ಹಾಯಿದೋಣಿ ಸಂಚರಿಸಿತು.

‘ಅಪ್ಪುವನ್ನು ನೀವು ಹಿಂದೆ ಪ್ರೀತಿಸ್ತಾ ಇದ್ರಿ; ಈಗ ಪೂಜಿಸುತ್ತಿದ್ದೀರಿ. ಇಲ್ಲಿಗೆ ಬಂದಿರುವ ಎಲ್ಲರಲ್ಲೂ ಅಪ್ಪು ಕಾಣಿಸುತ್ತಿದ್ದಾರೆ. ಅಪ್ಪು ಈ ಜೀವ ನಿನಗೋಸ್ಕರ’ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದಾಗ ನೆರೆದಿದ್ದವರಲ್ಲಿ ಬಹುತೇಕರು ಭಾವುಕರಾದರು.

ಅಪ್ಪು ನಿರ್ಮಾಣದ ಹಾಗೂ ಅಭಿನಯದ ಚಿತ್ರ ‘ಗಂಧದ ಗುಡಿ’ಯ ಟೀಸರ್‌ ಅನ್ನು ಎರಡೆರಡು ಬಾರಿ ಪ್ರದರ್ಶಿಸಲಾಯಿತು. ಅದರ ನಿರ್ದೇಶಕ ಅಮೋಘ ವರ್ಷ ಮಾತನಾಡಿ, ‘ಅವರು ಪ್ರೀತಿಯಿಂದ ಮಾಡಿದ ಸಿನಿಮಾ ಇದು. ಹೇಗಿದ್ದೇನೆಯೋ ಹಾಗೆಯೇ ತೋರಿಸಬೇಕು ಎಂದು ಬಯಸಿದ್ದರು. ಅವರೊಂದಿಗೆ ಒಂದೂವರೆ ವರ್ಷ ಕಳೆದದ್ದು ನನ್ನ ಪುಣ್ಯ. ಆ ಪುಣ್ಯವನ್ನು ಚಿತ್ರದ ಮೂಲಕ ಸಿನಿರಸಿಕರಿಗೆ ಹಂಚುತ್ತಿದ್ದೇನೆ. ಆ ಸಿನಿಮಾ ಅ.28ರಂದು ತೆರೆ ಕಾಣಲಿದೆ’ ಎಂದು ಹಂಚಿಕೊಂಡರು.

ಕಣ್ಣಾಲಿಗಳು ತುಂಬಿ ಬಂದವು:ನಂತರ ನಡೆದ ರಸಮಂಜರಿ ಕಾರ್ಯಕ್ರಮ ನಿರೂಪಿಸಿದ ಅನುಶ್ರೀ ಪುನೀತ್‌ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾ ನೆರೆದಿದ್ದವರಿಗೂ ನೆನಪಿಸುತ್ತಾ ಸಾಗಿದರು.

‘ನಟಸಾರ್ವಭೌಮ’ ಹಾಡಿಗೆ ಭಾವನಾ ಮತ್ತು ಇಬ್ರಾಹಿಂ ತಂಡದವರು ನೃತ್ಯ ಪ್ರಸ್ತುತಪಡಿಸಿ, ‘ಹೀ ಹಿಸ್ ಕಿಂಗ್‌ ಆಫ್‌ ದಿ ಸಿನಿಮಾ’ ಎಂದು ಸಾರಿದರು.

ಬಳಿಕ ವೇದಿಕೆಗೆ ಬಂದ ನಟ ವಶಿಷ್ಠ ಸಿಂಹ, ‘ಕೆಲವೇ ಶ್ರೇಷ್ಠ ಜೀವಗಳು ಮಾತ್ರ ಕಾಲವಾದ ನಂತರವೂ ಎಲ್ಲರ ಹೃದಯದಲ್ಲಿ ಇರುತ್ತಾವೆ. ಅದರಲ್ಲಿ ಪುನೀತ್‌ ಕೂಡ ಒಬ್ಬರು. ಅವರಂತೆ ಕೈಲಾದಷ್ಟು ನಾಲ್ಕು ಜನರಿಗೆ ಸಹಾಯ ಮಾಡುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ’ ಎಂದು ಹೇಳಿದರು.

ಅವರು ಹಾಡಿದ ‘ಬೊಂಬೆ ಹೇಳುತೈತೆ’ ಹಾಡಿಗೆ ನೆರೆದಿದ್ದವರೂ ದನಿಯಾಗಿ ನಮನ ಸಲ್ಲಿಸಿದರು. ಆ ಕ್ಷಣದಲ್ಲಿ ಬಹುತೇಕರ ಕಣ್ಣಾಲಿಗಳು ತಂಬಿಬಂದವು. ಅಪ್ಪು ಅಗಲಿಕೆಯ ನೋವು ಮರೆಸಲು ವಶಿಷ್ಠ ಟಗರು ಸಿನಿಮಾದ ಡೈಲಾಗ್ ಹೇಳಿ ರಂಜಿಸಿದರು. ‘ಮರೆತೇ ಹೋದೆನು ಬಂದಾ ಕಾರಣ’ ಹಾಡನ್ನೂ ಹಾಡಿದರು. ‘ಎದೆ ತುಂಬಿ ಹಾಡುವೆನು ತಂಡ’ದವರು ಧಮ್ ಪವರೇ ಧಮ್ ಪವರೇ ಹಾಡಿ ಪವರ್‌ಸ್ಟಾರ್‌ ನೆನಪನ್ನು ಮುಂದುವರಿಸಿದರು.

ಗಾಯಕಿ ಅನುರಾಧಾ ಭಟ್ ಮಧುರ ಕಂಠದಿಂದ ಮೂಡಿ ಬಂದ ‘ಆಹಾ ಎಂಥ ಆ ಕ್ಷಣ ನೆನೆದರೇ ತಲ್ಲಣ’ ‘ಅರಸು’ವನ್ನು ವೇದಿಕೆಗೆ ತಂದಿತು.

ಟಾರ್ಚ್‌ ಆನ್‌ ಮಾಡಿ ನಮನ:ಕಾರ್ಯಕ್ರಮಕ್ಕೆ ಮತ್ತೊಂದು ಹಂತದ ಮೆರುಗು ತಂದವರು ಸಂಗೀತ ನಿರ್ದೇಶಕ ಗುರುಕಿರಣ್. ‘ಮೈಲಾರಿ’ ಹಾಡಿನೊಂದಿಗೆ ವೇದಿಕೆ ಏರಿದ ಗುರುಕಿರಣ್‌, ಅಪ್ಪು ಅಭಿನಯದ ಸರಣಿ ಹಾಡುಗಳನ್ನು ಹಾಡುತ್ತಾ ರಂಜಿಸಿದರು. ನೆರೆದಿದ್ದವರು ಅವರೊಂದಿಗೆ ಹಾಡಿದರು; ಕುಣಿದು ಸಂಭ್ರಮಿಸಿದರು. ವೇದಿಕೆಯಿಂದ ದೂರದಲ್ಲಿದ್ದವರು ಕುಣಿದು ದೂಳೆಬ್ಬಿಸಿದರು.

ರಾಜ್‌ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾದ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ ಎಂದು ಪುನೀತ್‌ಗಾಗಿ ಹಾಡಿದ ರಾಘವೇಂದ್ರ ರಾಜ್‌ಕುಮಾರ್, ನೆರೆದಿದ್ದವರಿಗಾಗಿ ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ’ ಹಾಡಿಗೆ ದನಿಯಾದರು. ಪ್ರೇಕ್ಷಕರು ಮೊಬೈಲ್ ಫೋನ್‌ಗಳ ಟಾರ್ಚ್ ಆನ್ ಮಾಡಿ ಅಭಿಮಾನ ಪ್ರದರ್ಶಿಸಿದರು. ತಡರಾತ್ರಿವರೆಗೂ ಅಭಿಮಾನವು ಹೊಳೆಯಾಗಿಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT