ಮೈಸೂರು: ವಿಧಾನಸಭೆ ಚುನಾವಣೆಗೆ ಮುಹೂರ್ತ ಘೋಷಣೆಗೂ ಮುನ್ನವೇ, ಜಿಲ್ಲೆಯ ರಾಜಕಾರಣದಲ್ಲಿ ಯುವ ಹವಾ ಕಂಡುಬಂದಿದೆ.
ಒಂದೆಡೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಾ, ಇನ್ನೊಂದೆಡೆ ಮತದಾರರ ಮನವೊಲಿಸಿಕೊಳ್ಳುವ ಕಾರ್ಯದಲ್ಲಿ ಯುವಕರು ತೊಡಗಿದ್ದಾರೆ. ರಾಜಕಾರಣದಲ್ಲಿ ಭವಿಷ್ಯ ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಸರಾಸರಿ 40 ವರ್ಷ ವಯಸ್ಸಿನ ಆಸುಪಾಸಿನವರು. ಕೆಲವರು ಹೊಸ ಮುಖಗಳು. ಯುವಜನರ ಮನಸ್ಸನ್ನು ಗೆಲ್ಲುವುದಕ್ಕೆ ತಮ್ಮದೇ ರೀತಿಯಲ್ಲಿ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದ್ದಾರೆ.
ಬಹುತೇಕರು ಒಂದಿಲ್ಲೊಂದು ಕ್ರೀಡಾಕೂಟ ಆಯೋಜಿಸುವ ಮೂಲಕ ಯುವಕರನ್ನು ತಮ್ಮ ಅನುಯಾಯಿಗಳನ್ನಾಗಿ ಮಾಡಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಯುವಕರ ನಡುವಿನ ಜಟಾಪಟಿಯು ಹೇಗಿರಲಿದೆ ಎನ್ನುವುದು ಟಿಕೆಟ್ ಘೋಷಣೆಯಾದ ನಂತರ ಸ್ಪಷ್ಟವಾಗಲಿದೆ.
ಸಾಮಾಜಿಕ ಜಾಲತಾಣ ಬಳಕೆ:
ಭಾನುವಾರವಷ್ಟೆ 34ನೇ ಜನ್ಮದಿನ ಆಚರಿಸಿಕೊಂಡಿರುವ ಎಚ್.ಡಿ.ಕೋಟೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಕೂಡ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಮತ್ತೊಮ್ಮೆ ಸ್ಪರ್ಧೆಗೆ ಬಯಸಿದ್ದು, ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಅವರೂ ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಹೋದ ಚುನಾವಣೆಯಿಂದಲೂ ಪಕ್ಷ ಸಂಘಟನೆಯಲ್ಲಿ ಗುರುತರವಾದ ಜವಾಬ್ದಾರಿ ನಿರ್ವಹಿಸಿರುವ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದ ವರಿಷ್ಠರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಒಕ್ಕಲಿಗ ಸಮುದಾಯದ ಯುವ ನಾಯಕ. ಹೋದ ಚುನಾವಣೆಯಲ್ಲೂ ಅಧ್ಯಕ್ಷರಾಗಿದ್ದರು. ಸಂಘಟನೆಯ ಅನುಭವ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದೇ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವವರು ಅರುಣ್‌ಕುಮಾರ್ ಗೌಡ. ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ. ಪ್ರಚಾರದಲ್ಲಿ ತೊಡಗಿದ್ದಾರೆ.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ, ಜೆಡಿಎಸ್ ನಾಯಕ ಹಾಗೂ ಶಾಸಕರೂ ಆಗಿರುವ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಅವರಿಗೆ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ, ಕ್ಷೇತ್ರದ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರಬಲ ಆಕಾಂಕ್ಷಿ ಪ್ರತಾಪ್:
ವರುಣಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಂಚರಿಸುತ್ತಿದ್ದಾರೆ. ತಂದೆ ಸಿದ್ದರಾಮಯ್ಯ ಇಲ್ಲಿಗೆ ಬಾರದಿದ್ದರೆ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಅಲ್ಲಿ ಬಿಜೆಪಿಯಿಂದ, ಆರ್‌ಎಸ್‌ಎಸ್–ಸಂಘಟನೆ ಹಿನ್ನೆಲೆಯ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ, 3ನೇ ಬಾರಿಗೆ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜಿ.ದೇವನೂರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ನಿಂದ ಅಭಿಷೇಕ್ (ಹಿಂದಿನ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು) ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಪರಿಶಿಷ್ಟ ಜಾತಿಗೆ ಮೀಸಲಾದ ತಿ.ನರಸೀಪುರ ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿಯ ಅಶ್ವಿನ್‌ಕುಮಾರ್ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಅಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.
ಚಾಮರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ಎಲ್.ನಾಗೇಂದ್ರ ಮರು ಸ್ಪರ್ಧೆಗೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಇಲ್ಲಿ ಆಮ್ ಆದ್ಮಿ ಪಕ್ಷದಿಂದ ಮಾಲವಿಕಾ ಗುಬ್ಬಿವಾಣಿ ಆಕಾಂಕ್ಷಿಯಾಗಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ.
ಯಾತ್ರೆ ನಡೆಸಿದ್ದಾರೆ:
ಪಿರಿಯಾಪಟ್ಟಣದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಡಿ.ರವಿಶಂಕರ್ 75 ದಿನ ‘ಜನಾಶೀರ್ವಾದ ಯಾತ್ರೆ’ ನಡೆಸಿದ್ದಾರೆ. ಅವರೇ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸೇರಿದಂತೆ ಹಲವು ಮುಖಂಡರು ಈಗಾಗಲೇ ಹೇಳಿದ್ದಾರೆ.
ನಂಜನಗೂಡಿನಲ್ಲಿ ಹಾಲಿ ಶಾಸಕ ಹರ್ಷವರ್ಧನ್ ಮತ್ತೊಮ್ಮೆ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ ಹೋದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಕೆ.ವಿ.ಮಲ್ಲೇಶ್‌ಗೆ ಮತ್ತೊಮ್ಮೆ ಟಿಕೆಟ್ ಘೋಷಣೆಯಾಗಿದೆ. ಅವರು ಈಗಾಗಲೇ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.
ನರಸಿಂಹರಾಜ ಕ್ಷೇತ್ರದಲ್ಲಿ ಹೋದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಕ್ರೈಸ್ತ ಸಮುದಾಯದ ಮುಖಂಡ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡಾ.ಅನಿಲ್ ಥಾಮಸ್ ಕೂಡ ಆ ಪಕ್ಷದ ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಮೇಯರ್ ಅಯೂಬ್ ಖಾನ್ ಆಕಾಂಕ್ಷಿಯಾಗಿದ್ದಾರೆ. ಯುವಜನರ ನಡುವೆ ನಡೆಯುತ್ತಿರುವ ಟಿಕೆಟ್ ಫೈಟ್‌ನಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದು ತಿಳಿಯಲು ಬಹಳ ದಿನಗಳು ಬೇಕಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.