ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ನಂ:1 ಮೈದಾನವಾಗಿ ‘ನೆಹರೂ ಕ್ರೀಡಾಂಗಣ’

ಹಗಲು–ರಾತ್ರಿ ಲಭ್ಯತೆಯ ಹೈಟೆಕ್ ಅಂಕಣಗಳು, 10 ಅಡಿ ವಿಸ್ತಾರದ ವಾಯುವಿಹಾರ ಪಥ
Last Updated 10 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಶಿವಮೊಗ್ಗ:ವಾಯುವಿಹಾರಿಗಳು, ಕ್ರೀಡಾಪ್ರಿಯರ ನೆಚ್ಚಿನ ತಾಣ ನೆಹರೂ ಕ್ರೀಡಾಂಗಣ ₹ 24.85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ರೀಡಾಂಗಣವಾಗಿ ರೂಪುಗೊಳ್ಳುತ್ತಿದ್ದು, ರಾಜ್ಯದಲ್ಲೇ ನಂಬರ್ 1 ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

1977ರಲ್ಲಿ ನಿರ್ಮಿಸಿದ ಈ ಕ್ರೀಡಾಂಗಣ 42 ವರ್ಷಗಳಿಂದಲೂ ಜಿಲ್ಲೆಯ ಜನರ ನಿತ್ಯ ಜೀವನದ ಒಂದು ಭಾಗವಾಗಿ ಮುಂದುವರಿದುಕೊಂಡು ಬರುತ್ತಿದೆ. ಮೂರು ದಶಕಗಳು ಈ ಕ್ರೀಡಾಂಗಣ ಕೇವಲ ಮಣ್ಣಿನ ಮೈದಾನವಾಗಿಯೇ ಇತ್ತು. 9 ವರ್ಷಗಳ ಹಿಂದೆ ಮೊದಲ ಬಾರಿಗೆ ಸಿಂಥೆಟಿಕ್‌ ಟ್ರ್ಯಾಕ್ ಹೊಂದಿತ್ತು. ಎರಡು ವರ್ಷಗಳ ಹಿಂದೆ ₹ 42 ಲಕ್ಷ ವೆಚ್ಚದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು.

ಶಿವಮೊಗ್ಗಕ್ಕೆ ಸ್ಮಾರ್ಟ್‌ ಸಿಟಿ ಸ್ಥಾನ ದೊರೆತ ಮೇಲೆ ಕ್ರೀಡಾಂಗಣದ ಚಿತ್ರಣವೇ ಬದಲಾಗುತ್ತಿದೆ. ಆರಂಭದಲ್ಲಿ ರೂಪಿಸಿದ ಕ್ರೀಯಾ ಯೋಜನೆಯಲ್ಲಿ ₹ 4.85 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ಸುತ್ತಲೂ ತಡೆಗೋಡೆ ನಿರ್ಮಾಣ, ರೂಫಿಂಗ್, ಸ್ಥಳಾಂತರಿಸಬಹುದಾದ ವಾಲಿಬಾಲ್ ಮೈದಾನ, ವಾಯುವಿಹಾರ ಮಾರ್ಗ ರೂಪಿಸುವ ಕೆಲಸ ಪ್ರಗತಿಯತ್ತ ಸಾಗಿದೆ.

ಈ ಮಧ್ಯೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮತ್ತೆ ₹ 20 ಕೋಟಿ ದೊರೆಯತ್ತಿದೆ. ಈ ಅನುದಾನದಲ್ಲಿ ಬ್ಯಾಸ್ಕೆಟ್‌ ಬಾಲ್ ಮೈದಾನ, ಹೈಟೆಕ್‌ ಫುಟ್‌ಬಾಲ್ ಮೈದಾನ, ಮೆಟ್ಟಿಲುಗಳ ಮೇಲೆ ರೂಫಿಂಗ್, ಸುತ್ತಲೂ ಹೈಮಾಸ್ಟ್ ದೀಪ, 10 ಅಡಿ ವಿಸ್ತಾರದ ವಾಕಿಂಗ್ ಪಾಥ್, 100X100 ಅಳತೆ ಜಾಗದಲ್ಲಿ ಮಲ್ಟಿ ಹೈಟೆಕ್‌ ಜಿಮ್, ಕಬಡ್ಡಿ, ಟೇಕ್ವಾಂಡೊ ಅಂಕಣಗಳನ್ನು ರೂಪಿಸಲಾಗುತ್ತಿದೆ. ಹಲವು ಭಾಗಗಳಲ್ಲಿ ಹೈಟೆಕ್ ಶೌಚಾಲಯಗಳನ್ನೂ ನಿರ್ಮಿಸಲಾಗುತ್ತಿದೆ.

ಈ ಎಲ್ಲ ಕೆಲಸಗಳನ್ನೂ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ವಹಿಸಲಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತದೆ.

ಸಾರ್ವಜನಿಕರ ಕಾಳಜಿಯ ಫಲ:

ಒಂದು ಕಾಲದಲ್ಲಿ ಇಡೀ ನಗರದ ಕ್ರೀಡಾಚಟುವಟಿಕೆಗೆ ಇದ್ದ ಒಂದೇ ತಾಣ ಈ ನೆಹರೂ ಕ್ರೀಡಾಂಗಣ. ಈ ಮೈದಾನವನ್ನು ಹಿಂದೆ ಕ್ರೀಡೆಯ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಕೀಯ ಸಮಾವೇಶಗಳು, ಧರ್ಮಸಭೆಗಳು, ಆಹಾರ ಮೇಳಗಳು, ರಾಷ್ಟ್ರೀಯ ಹಬ್ಬಗಳು, ಜಯಂತಿ ಮಹೋತ್ಸವಗಳು, ಪೊಲೀಸ್ ಚಟವಟಿಕೆಗೆ ನೀಡಲಾಗುತ್ತಿತ್ತು. ಹೀಗೆ ವಿಭಿನ್ನ ಚಟುವಟಿಕೆಗೆ ಅವಕಾಶ ನೀಡುತ್ತಾ ಕ್ರೀಡೆಯನ್ನೇ ಮೂಲೆ ಗುಂಪು ಮಾಡಲಾಗಿತ್ತು.

ಜಿಲ್ಲಾ ಕ್ರೀಡಾಂಗಣ ಸಮಿತಿ, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಹಣ ಮಾಡುವ ದಂಧೆಯಲ್ಲಿ ತೊಡಗಿವೆ. ಕ್ರೀಡಾಪ್ರಿಯರಿಗೆ ದ್ರೋಹ ಬಗೆಯುತ್ತಿದ್ದಾರೆ. ಕ್ರೀಡಾ ಹಾಸ್ಟೆಲ್‌ನಲ್ಲಿ ಇರುವ ಮಕ್ಕಳ ಕ್ರೀಡಾ ತರಬೇತಿಗೂ ಅಡ್ಡಿಯಾಗಿದೆ ಎಂದು ಆರೋಪಿಸಲಾಗಿತ್ತು.

ಜಿಲ್ಲಾ ಒಲಿಂಪಿಕ್ಸ್ ಅಸೋಸಿಯೇಷನ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್, ಸಹ್ಯಾದ್ರಿ ಸ್ನೇಹ ಸಂಘ ಸೇರಿ ಎಲ್ಲಾ ಕ್ರೀಡಾ ಸಂಸ್ಥೆಗಳು ಮತ್ತು ಕ್ರೀಡಾಪಟುಗಳು ಹೋರಾಟದಲ್ಲಿ ಭಾಗವಹಿಸಿದ್ದರು. ನಿರಂತರ ಪ್ರತಿಭಟನೆಗಳಿಗೆ ಮಣಿದ ಜಿಲ್ಲಾಡಳಿತ ಕೊನೆಗೂ ಇತರೆ ಚಟುವಟಿಕೆಗೆ ಮೈದಾನ ಬಳಕೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

ಈಗ ಎಲ್ಲ ಅಡೆತಡೆಗಳೂ ನಿವಾರಣೆಯಾಗಿ ಕ್ರೀಡಾ ಚಟುವಟಿಕೆಗೆ, ನಾಗರಿಕರ ವಾಯುವಿಹಾರಕ್ಕೆ ಕ್ರೀಡಾಂಗಣ ಮೀಸಲಾಗಿದೆ. ಹೈಟೆಕ್‌ ಆಗುವತ್ತ ದಾಪುಗಾಲು ಇಡುತ್ತಿದ್ದು, ನಾಗರಿಕರ ನೆಚ್ಚಿನ ತಾಣವಾಗಲಿದೆ. ರಾಜ್ಯದಲ್ಲೇ ಮಾದರಿ ಕ್ರೀಡಾಂಗಣವಾಗಿ ರೂಪುಗೊಳ್ಳಲಿದೆ.

**

ಹಿಂದಿನ, ಈಗಿನ ಶಾಸಕರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ಕಾಳಜಿಯ ಫಲವಾಗಿ ಕ್ರೀಡಾಂಗಣ ಹೈಟೆಕ್‌ ಆಗುತ್ತಿದೆ. ಒಂದು ವರ್ಷದ ಒಳಗೆ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ.
-ರಮೇಶ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

**

ಹೈಕೆಟ್‌ ಮಾಡಿದರೆ ಸಾಲದು. ಇಡೀ ಕ್ರೀಡಾಂಗಣವನ್ನು ದೂಳು ಮುಕ್ತ ಮಾಡಬೇಕು. ಕಾಮಗಾರಿಗಳು ಕಳಪೆಯಾಗದಂತೆ ನೋಡಿಕೊಳ್ಳಬೇಕು.
–ವೈ.ಕೆ. ಸೂರ್ಯನಾರಾಯಣ, ವಾಯುವಿಹಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT