ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ದಾಳಿ; ಕಡಿವಾಣ ಯಾವಾಗ?

15 ದಿನಗಳಿಂದ ಉಪಟಳ; ರಸ್ತೆ ಮೇಲೆ ಓಡಾಡಲು ಭಯ
Last Updated 1 ಆಗಸ್ಟ್ 2019, 11:51 IST
ಅಕ್ಷರ ಗಾತ್ರ

ನಾಲತವಾಡ: ಪಟ್ಟಣದಲ್ಲಿ 15 ದಿನಗಳಿಂದ ಹಂದಿಗಳ ಉಪಟಳದಿಂದಾಗಿ ಮಕ್ಕಳು ರಸ್ತೆ ಮೇಲೆ ಓಡಾಡಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈಚೆಗೆ ಆರು ವರ್ಷದ ಬಾಲಕನ ಮೇಲೆ ಹಂದಿಗಳ ಗುಂಪು ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡ ಆತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸ್ಥಳೀಯ ನಾಡಗೌಡ ಓಣಿಯ ನಿವಾಸಿ ಮಹ್ಮದ್‌ಸಾಬ್ ಎತ್ತಿನಮನಿ ಅವರ ಮಗ ರಿಯಾಜ್ ಮಹಮ್ಮದ್ ಬಯಲು ಬಹಿರ್ದೆಸೆಗೆ ಹೋದ ಸಮಯದಲ್ಲಿ ಹಿಂಬದಿಯಿಂದ ಬಂದ ಹಂದಿಗಳ ಗುಂಪು ಏಕಾಏಕಿ ದಾಳಿ ಮಾಡಿವೆ. ನಂತರ ಆತನನ್ನು ಕಚ್ಚಿ ಎಳೆದಾಡಲು ಪ್ರಾರಂಭಿಸಿದಾಗ ರಿಯಾಜ್ ಕಿರುಚಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ಜನರು ಬಾಲಕನನ್ನು ಹಂದಿಗಳ ಬಾಯಿಯಿಂದ ಬಿಡಿಸಿದ್ದಾರೆ. ಅಷ್ಟರಲ್ಲಿ ಆತನಿಗೆ ತೀವ್ರ ರಕ್ತಸ್ರಾವ ಆರಂಭವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು.

ಇದೇ ಮೊದಲಲ್ಲ: ಈ ಹಿಂದೆಯೂ ನಾಡಗೌಡರ ಓಣಿಯ ಗುರಿಕಾರ ಕುಟುಂಬದ ಮಗುವೊಂದು ಆಟವಾಡುವ ಸಮಯದಲ್ಲಿ ಹಂದಿಗಳು ದಾಳಿ ಮಾಡಲು ಯತ್ನಿಸಿದಾಗ, ಸಾರ್ವಜನಿಕರು ರಕ್ಷಿಸಿದ್ದರು. ಇದಾದ ಬಳಿಕ ಬೀರಪ್ಪ ಹುಡೇದ ಅವರ ಪುತ್ರಿ ಭಾಗಮ್ಮಳಿಗೆ ಹಂದಿಗಳು ಕಚ್ಚಿ, ಗಾಯಗೊಳಿಸಿದ್ದವು.

ಮಕ್ಕಳನ್ನು ಹೊರಗೆ ಕಳುಹಿಸಲು ಪಾಲಕರು ಭಯ ಪಡುವಂತಾಗಿದ್ದು, ಬಹಿರ್ದೆಸೆಗೆ ಹೋಗಬೇಕಾದರೆ ಕೆಲಸಗಳನ್ನು ಬದಿಗಿಟ್ಟು ಮಕ್ಕಳೊಂದಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಮನೆಯ ಜಗುಲಿಯ ಮೇಲೆ ಇಟ್ಟಿರುವ ವಸ್ತುಗಳನ್ನು ಹಂದಿಗಳು ಎಳೆದಾಡುವುದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ.

‘ಪಟ್ಟಣದಲ್ಲಿ ಹಂದಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಹಂದಿ ಸಾಕುವವರು ಅವುಗಳನ್ನು ಬೇಕಾಬಿಟ್ಟಿಯಾಗಿ ಬಿಟ್ಟಿದ್ದಾರೆ. ಅನೇಕ ಬಾರಿ ಮನೆಗಳಿಗೆ ನುಗ್ಗಿ ಅಲ್ಲಿನ ಸಾಮಾನುಗಳನ್ನು ಎಳೆದಾಡಿವೆ. ಹಂದಿಗಳ ಉಪಟಳದಿಂದಾಗಿ ರಸ್ತೆ ಮೇಲೆ ಸಂಚರಿಸುವುದು ಕಷ್ಟವಾಗುತ್ತಿದೆ’ ಎಂದು ಇಲ್ಲಿನ ಜನರು ಆರೋಪಿಸುತ್ತಾರೆ.

‘ಕ್ರಮಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಂದಿಗಳನ್ನು ಪಟ್ಟಣದಿಂದ ಹೊರಹಾಕಿ, ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು’ ಎಂದು ಸಂಗಮನಾಥ ಸಾಲಿಮಠ, ಪ್ರಕಾಶ ಚಳಗೇರಿ, ಮಹಾಂತೇಶ ಚಳಗೇರಿ ಆಗ್ರಹಿಸಿದ್ದಾರೆ.

‘ಹಂದಿ ಸಾಕಣೆಯಿಂದ ಬದುಕು ಸಾಗಿಸುತ್ತಿದ್ದೇನೆ. ಹಂದಿಗಳು ದಾಳಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅಲ್ಲದೆ, ಹಂದಿಗಳು ಎಷ್ಟಿವೆ ಎಂಬುದೂ ಗೊತ್ತಿಲ್ಲ. ಅವುಗಳಲ್ಲಿ ಕೆಲವನ್ನು ಮಾರಾಟ ಮಾಡುತ್ತೇನೆ’ ಎಂದು ಹಂದಿಗಳ ಮಾಲೀಕ ಯಮನೂರಿ ಭಜಂತ್ರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT