ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಂಗಭೂಮಿಯ ಕ್ರಿಯಾಶೀಲ ನಿರ್ದೇಶಕ ‘ಲವ’

Last Updated 19 ಜನವರಿ 2019, 12:45 IST
ಅಕ್ಷರ ಗಾತ್ರ

ಶಿವಮೊಗ್ಗ:ಬುಡಕಟ್ಟು ಹಕ್ಕಿಪಿಕ್ಕಿ ಸಮುದಾಯ, ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಉಚಿತ ರಂಗಶಿಬಿರ ಆಯೋಜಿಸುವ ಮೂಲಕ ರಂಗಭೂಮಿಗೆ ಮಾನವೀಯ ಸ್ಪರ್ಶ ನೀಡಿದವರು ರಂಗ ನಿರ್ದೇಶಕ ಲವ ಜಿ.ಆರ್.

ಭದ್ರಾವತಿ ತಾಲ್ಲೂಕು ಗೋಣಿಬೀಡು ಗ್ರಾಮದ ಕೃಷಿ ಕುಟುಂಬದ ರಾಮೇಗೌಡ, ರಂಗಮ್ಮ ದಂಪತಿಯ ಪುತ್ರ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಸಹ್ಯಾದ್ರಿ ಕಾಲೇಜಿನಲ್ಲಿ ಪಾಠ ಮಾಡುತ್ತಲೇ ರಂಗಭೂಮಿಯ ಚಟುವಟಿಕೆಗಳಲ್ಲಿ ಸಕ್ರಿಯರಾದರು.

ಕುವೆಂಪು ಅವರ ಜಲಗಾರ, ಶ್ಮಶಾನ ಕುರುಕ್ಷೇತ್ರಂ, ಮೋಡಣ್ಣನ ತಮ್ಮ, ಲಂಕೇಶರ ಗುಣಮುಖ. ಗಿಳಿಯು ಪಂಜರದೊಳಿಲ್ಲ, ಶ್ರೀನಿವಾಸರ ಕಾಕನ ಕೋಟೆ, ಜಯಂತ ಕಾಯ್ಕಿಣಿ ಅವರ ಜತೆಗಿರುವನು ಚಂದಿರ, ಎಚ್.ಎಸ್. ಶಿವಪ್ರಕಾಶ ಅವರ ಮಂಟೇಸ್ವಾಮಿ ಕಥಾ ಪ್ರಸಂಗ, ರಾಜಪ್ಪ ದಳವಾಯಿ ಅವರ ಕುಲಂ, ಒಂದು ಬೊಗಸೆ ನೀರು, ಮಂತ್ರ ದಂಡದ ಇನ್ನೊಂದು ತುದಿ (ಮಲಯಾಳಂ ಕನ್ನಡ ಅನುವಾದ) ಪೋಲಿಸ್ ಚೌಕಿ (ಹಿಂದಿ ಅನುವಾದ) ಅವರು ನಿರ್ದೇಶಿಸಿದ ಪ್ರಮುಖ ನಾಟಕಗಳು.

ಅಖಿಲ ಭಾರತ ವಿದ್ಯಾರ್ಥಿ ನಾಟಕೋತ್ಸವ ಮೈಸೂರಿನಲ್ಲಿ ಒಂದೇ ದಿನ ಇವರ ಎರಡು ನಾಟಕಗಳು ಪ್ರದರ್ಶನಗೊಂಡಿರುವುದು ಹೆಗ್ಗಳಿಕೆ.

ಇಂದಿನ ಭಾರತ, ಬೇತಾಳನ ಪ್ರಶ್ನೆ, ಕಾಲಜ್ಞಾನ, ವಿಮೋಚನೆ ಅವರ ಪ್ರಹಸನಗಳು. ಬೇತಾಳನ ಪ್ರಶ್ನೆ ಪ್ರಹಸನಕ್ಕೆ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ಸಂದಿದೆ.ಅವರು ಸ್ಥಾಪಿಸಿದ ಸಹ್ಯಾದ್ರಿ ಕಲಾತಂಡ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿಟ್ಟುಕೊಂಡು ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಯುವ ಸ್ಪರ್ಧೆಗಳಲ್ಲಿ ಇವರ ವಿಕಾಸ ಮತ್ತು ಚೆಲ್ಲಿದ ಚಿತ್ರಗಳು ನಾಟಕಗಳಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. 5ನೇ ತರಗತಿಯಲ್ಲೇ ಬಾಲ ನಟರಾಗಿ ಏಕಲವ್ಯ ನಾಟಕದ ಮೂಲಕ ರಂಗ ಪ್ರವೇಶಿಸಿದ್ದರು. ಭಕ್ತ ಪ್ರಹ್ಲಾದ ಅಭಿನಯದ (ಬಾಲ ನಟನೆ) ಮೂಲಕ ರಂಗ ಗೀಳು ಹಚ್ಚಿಕೊಂಡವರು. ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ಇದುವರೆಗಿನ ಬರಹಗಳು:ನಾಲ್ಕಾಣೆಗೊಂದು ಮಾತು, ಸೆಸಿಲ್ ಸಿಂಹ, ಪಾಸ್-ಫೇಲ್, ಗುಡು ಗುಡು ಗುಮ್ಮಟ ದೇವರು, ಚಿನ್ನದ ಕಾಳು, ಚೆಲ್ಲಿದ ಚಿತ್ರಗಳು. ವಿಕಾಸ ಅವರು ಬರೆದ ನಾಟಗಳು. ಸುಮಾರು 30ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.

25ಕ್ಕೂ ಹೆಚ್ಚು ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಜಾನಪದ ಜಾತ್ರೆ, ಸುಗ್ಗಿ, ಹುಗ್ಗಿ, ಕಂಸಾಳೆ ತರಬೇತಿ, ವೀರಗಾಸೆ, ಪೂಜಾ ಕುಣಿತಗಳ ಮೂಲಕವೂ ಛಾಪು ಮೂಡಿಸಿದ್ದಾರೆ. ರಂಗ ಪಯಣದ ತಮ್ಮ ಅನುಭವ ಕುರಿತು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ನಾಟಕದ ಗೀಳು ಕಂಡಿದ್ದು ಹೇಗೆ?

ಗೋಣಿಬೀಡು ಶಾಲಾ ವಾರ್ಷಿಕೋತ್ಸವದಲ್ಲಿ ಶಿಕ್ಷಕರು ಮೊದಲ ಬಾರಿ ಬಣ್ಣ ಹಚ್ಚಿಸಿದ್ದರು. ಅಲ್ಲಿಂದ ನಾಟಕ ಗೀಳು ಅಂಟಿತು. ಶಾಲಾ, ಕಾಲೇಜು ದಿನಗಳಲ್ಲಿ ಕಥೆ, ಕವನ ಬರೆಯುತ್ತಿದ್ದೆ. ಸ್ನಾತಕೋತ್ತರ ಪದವಿ ಮುಗಿದ ನಂತರ ಸಂಪೂರ್ಣ ರಂಗಚಟುವಟಿಕೆಗಳಿಗೆ ಬದುಕು ಮೀಸಲಾಗಿಟ್ಟೆ.

* ಮಕ್ಕಳ ನಾಟಕಗಳತ್ತ ಏಕೆ ಒಲವು?

–ರಂಗಾಯಣ ಮಕ್ಕಳ ನಾಟಕಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿತ್ತು. ಅಲ್ಲಿಗೆ ಹೋಗುತ್ತಿದ್ದ ನಾನು ಮಕ್ಕಳ ಒಡನಾಟದಲ್ಲಿ ಸಮಯ ಕಳೆದೆ. ಅವರ ಪ್ರತಿಭೆ ಕಂಡು ಬೆರಗಾದೆ. ಅಂದಿನಿಂದ ಮಕ್ಕಳಿಗಾಗಿ ಹೆಚ್ಚಿನ ನಾಟಕ ರೂಪಿಸಬೇಕು. ನಿರ್ದೇಶಿಸಬೇಕು ಎಂದು ನಿರ್ಧರಿಸಿದೆ.

ಮೊದಲ ಬಾರಿ ಕುವೆಂಪು ಅವರ ಮೊಡಣ್ಣನ ತಮ್ಮ ನಾಟಕ ನಿರ್ದೇಶಿಸಿದಾಗ ಬೋಧನಾ ಪ್ರಧಾನ ಸಂಗತಿಗಳು ಕಂಡವು. ನಂತರ ಮಕ್ಕಳಿಗಾಗಿಯೇ 15 ನಾಟಕ ನಿರ್ದೇಶಿಸಿದೆ. ಸ್ವತಃ 5 ನಾಟಕಗಳನ್ನು ರಚಿಸಿದ್ದೇನೆ. ಶಾಲಾ–ಕಾಲೇಜು ವಿದ್ಯಾರ್ಥಿಗಳೇ ನನ್ನ ಕೇಂದ್ರ ಬಿಂದು. ಕಳೆದ 15 ವರ್ಷಗಳಿಂದ ನಾರಾರು ವಿದ್ಯಾರ್ಥಿಗಳಿಗೆ ರಂಗಭೂಮಿ ನಂಟು ಬೆಳೆಸಿದ್ದೇನೆ.

* ನಾಟಕಗಳ ಆಯ್ಕೆಯ ಮಾನದಂಡ ಹೇಗೆ?

–ಸಮಕಾಲಿನ ತಲ್ಲಣಗಳಿಗೆ ಪೂರಕವಾದ ವಸ್ತುವಿಗೆ ಮೊದಲ ಆದ್ಯತೆ. ಬರಗಾಲ, ಯುದ್ಧ, ರಾಜಕೀಯ ತಲ್ಲಣ, ಸ್ತ್ರೀ ಸಂವೇದನೆ, ದಲಿತ ಕಥನ ಮತ್ತಿತರ ವಿಷಯಗಳೇ ನಾಟಕದ ವಸ್ತುಗಳು. ಮಕ್ಕಳ ನಾಟಕ ಆಯ್ಕೆ ಮಾಡುವಾಗ ಶಿಕ್ಷಣ, ನೈತಿಕ ಪ್ರಜ್ಞೆ, ಪರಿಸರ, ಬೋಧನಾ ಕ್ರಮ, ಕೌಟುಂಬಿಕ ಸಂಸ್ಕಾರ, ವಿನ್ಯಾಸ ರೂಪಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

* ರಂಗಭೂಮಿಯ ಹೊಣೆಗಾರಿಕೆ ಏನು?

–ವ್ಯಕ್ತಿಯ ಸೌಂದರ್ಯ ಕಾಣುವುದು ಮಾತಿನಲ್ಲಿ. ನಾಡಿನ ಸೌಂದರ್ಯ ಅದರ ಸಾಹಿತ್ಯ, ರಂಗಭೂಮಿಯಲ್ಲಿದೆ. ರಂಗಭೂಮಿ ಜಗತ್ತಿನ ತಲ್ಲಣಗಳಿಗೆ ಸ್ಪಂದಿಸುತ್ತಾ ತನ್ನ ಹೊಣೆಗಾರಿಕೆ ನಿಭಾಯಿಸಬೇಕು. ರಂಗಭೂಮಿ ಹುಟ್ಟಿದ್ದೇ ಸಮಾಜದ ಸಮಸ್ಯೆಗೆ ಪರಿಹಾರ ಹುಡುಕಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT