ಗುರುವಾರ , ನವೆಂಬರ್ 21, 2019
23 °C
ಶಿವಮೊಗ್ಗ

ಪ್ಲಾಸ್ಟಿಕ್ ರಾಕ್ಷಸ ಸಂಹಾರಕ್ಕೆ ನಾಂದಿ; ಇನ್ನೂ ದೂರವಿದೆ ಕ್ರಮಿಸುವ ಹಾದಿ

Published:
Updated:
Prajavani

ಶಿವಮೊಗ್ಗ: ಕ್ಯಾರಿ ಬ್ಯಾಗ್ ಸೇರಿದಂತೆ ಮರುಬಳಕೆ ಮಾಡಲಾಗದ ಹಲವು ಪ್ಲಾಸ್ಟಿಕ್ ಸಾಮಗ್ರಿಗಳ ಉತ್ಪಾದನೆ, ಬಳಕೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಶಿವಮೊಗ್ಗ ನಗರ ಪಾಲಿಕೆ ಅಧಿಕಾರಿಗಳ ತಂಡ ನಿರಂತರ ದಾಳಿ ನಡೆಸಿ ವರ್ತಕರಿಗೆ ಬಿಸಿಮುಟ್ಟಿಸುತ್ತಿದೆ.

ನಿಷೇಧ ಹಿಂದೆಯೂ ಇತ್ತು. ಆದರೆ, ಪರಿಣಾಮಕಾರಿಯಾಗಿ ಜಾರಿ ಮಾಡಿರಲಿಲ್ಲ. ಸೆ.1ರಿಂದ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಜನರಲ್ಲೂ ಒಂದಷ್ಟು ಅರಿವು ಮೂಡಿದೆ. ಆದರೆ, ಅಕ್ಕಿ, ಬೇಳೆ, ಬೆಲ್ಲ, ಮೈದಾ, ಸಕ್ಕರೆ, ಗೋದಿ, ಎಣ್ಣೆ, ಕುರುಕಲು ಪದಾರ್ಥಗಳು ಪ್ಲಾಸ್ಟಿಕ್‌ ಕವರ್‌ಗಳಲ್ಲೇ ಬರುತ್ತಿವೆಯಲ್ಲ. ಮನೆ ಬಾಗಿಲಿಗೆ ನಿತ್ಯವೂ ತಲುಪುವ ನಂದಿನಿ ಹಾಲೂ ಪ್ಲಾಸ್ಟಿಕ್‌ ಕವರ್‌ನಲ್ಲೇ ಇರುತ್ತದಲ್ಲ. ಅವುಗಳನ್ನು ಹಾಕಿಕೊಡುವ ಕವರ್‌ ಮಾತ್ರ ಏಕೆ ಬಳಸಬಾರದು ಎಂದು ಅಧಿಕಾರಿಗಳ ತಂಡದ ಎದುರು ಬಹುತೇಕ ಅಂಗಡಿ, ಮುಂಗಟ್ಟು, ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ತಗಾದೆ ತೆಗೆಯುತ್ತಿದ್ದಾರೆ.

ಎಲ್ಲೆಲ್ಲೂ ಪ್ಲಾಸ್ಟಿಕ್‌ ರಾಕ್ಷಸ: ಸರ್ಕಾರ ಎಲ್ಲ ರೀತಿಯ ಪ್ಲಾಸ್ಟಿಕ್‌ ಕವರ್‌ಗಳು, ತಟ್ಟೆ, ಲೋಟಗಳ ಬಳಕೆ ನಿಷೇಧಿಸಿದೆ. ಆದರೆ, ಹಾಲು, ದಿನಸಿ ಸೇರಿದಂತೆ ಅಧಿಕೃತ ಪರವಾನಗಿ ಪಡೆದು ಮುದ್ರಿತ ಪ್ಯಾಕ್‌ಗಳಲ್ಲಿ ತುಂಬುವ ಪ್ಲಾಸ್ಟಿಕ್‌ ಬಳಕೆಗೆ ಅನುಮತಿ ನೀಡಿದೆ. ಕವರ್‌, ತಟ್ಟೆ, ಲೋಟ, ಟೇಬಲ್‌ ಕ್ಲಾತ್ 50 ಎಂಎಂ ಮೈಕ್ರಾನ್‌ಗಿಂತ ಹೆಚ್ಚಿದ್ದರೂ ಅವುಗಳನ್ನು ಬಳಸುವಂತಿಲ್ಲ. ಒಂದು ಬಟ್ಟೆ ಅಂಗಡಿಗೆ ಹೋದರೆ ಆ ಎಲ್ಲ ಬಟ್ಟೆಗಳನ್ನೂ ಪ್ಲಾಸ್ಟಿಕ್‌ ಕವರ್‌ಗಳಲ್ಲೇ ಇಟ್ಟಿರುತ್ತಾರೆ. ಚರ್ಮದ ಬ್ಯಾಗ್, ಪಾದರಕ್ಷೆಗಳನ್ನೂ ದೂಳಿನಿಂದ ಸಂರಕ್ಷಿಸಲು, ಹಾಳಾಗದಂತೆ ನೋಡಿಕೊಳ್ಳಲು ಪ್ಲಾಸ್ಟಿಕ್‌ ಹೊದಿಗೆಯನ್ನೇ ಬಳಸುತ್ತಿದ್ದಾರೆ.

ಘನತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ದೇ ಸಿಂಹಪಾಲು: ನಗರದಲ್ಲಿ ಪ್ರತಿ ನಿತ್ಯ ಸಂಗ್ರಹಿಸುವ ಘನತ್ಯಾಜ್ಯದಲ್ಲಿ ಶೇ 50ಕ್ಕೂ ಅಧಿಕ ಕಸ ಪ್ಲಾಸ್ಟಿಕ್‌ ಮಯವಾಗಿರುತ್ತದೆ. ಮರು ಬಳಕೆಗೆ ಯೋಗ್ಯವಲ್ಲದ ವಸ್ತುಗಳು ಕೊಳೆಯುವುದೂ ಇಲ್ಲ. ಅನುಪಿನಕಟ್ಟೆ ಬಳಿ ಸಂಗ್ರಹವಾದ ಸಾವಿರಾರು ಟನ್‌ ಘನತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಗುಡ್ಡವೇ ನಿರ್ಮಾಣವಾಗಿದೆ. ಘನತ್ಯಾಜ ಸಂಗ್ರಹದ ನೆಲ ಹಾಸಿಗೂ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.

ಗಮನ ಸೆಳೆಯುತ್ತಿರುವ ಫಲಕಗಳು: ನಗರದ ಬಹುತೇಕ ಹೋಟೆಲ್‌, ಅಂಗಡಿ ಮುಂಗಟ್ಟುಗಳ ಮುಂದೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು, ಬಳಸಬಾರದು ಎಂದು ಅರಿವು ಮೂಡಿಸುವ ಫಲಕಗಳು ಗಮನ ಸೆಳೆಯುತ್ತಿವೆ. ಕೆಲವು ಹೋಟೆಲ್‌ಗಳು ಪಾರ್ಸಲ್‌ ತೆಗೆದುಕೊಂಡು ಹೋಗಲು ಬಟ್ಟೆ ಬ್ಯಾಗ್ ತಂದವರಿಗೆ ಶೇ 10ರಷ್ಟು ರಿಯಾಯಿತಿ ಎಂದು ಫಲಕ ಹಾಕಿವೆ.

ದಾಳಿ ಮಧ್ಯೆಯೂ ಕದ್ದುಮುಚ್ಚಿ ಬಳಕೆ: ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳಾದ ರಾಘವೇಂದ್ರ, ಸುಧಾರಾಣಿ, ತೇಜಸ್ವಿನಿ ಅವರು ಮೂರು ತಂಡ ಮಾಡಿಕೊಂಡು ನಿರಂತರ ದಾಳಿ ನಡೆಸುತ್ತಿದ್ದಾರೆ. ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಬಸ್‌ ನಿಲ್ದಾಣ ಸೇರಿ ಹಲವು ಕಡೆ ಪರಿಶೀಲನೆ ನಡೆಸಿದ್ದಾರೆ. ವರ್ತಕರಲ್ಲಿ ಮತ್ತೆ ಬಳಸದಂತೆ ಅರಿವು ಮೂಡಿಸಲಾಗುತ್ತಿದೆ. ಮಲವಗೊಪ್ಪದ ಪ್ಲಾಸ್ಟಿಕ್‌ ತಯಾರಿಕಾ ಘಟಕಕ್ಕೆ ಬೀಗಮುದ್ರೆ ಹಾಕಲಾಗಿದೆ. ಆಟೊಕಾಂಪ್ಲೆಕ್ಸ್ ಘಟಕಕ್ಕೆ ಮರು ಬಳಕೆಗಷ್ಟೇ ಅನುಮತಿ ನೀಡಲಾಗಿದೆ. ಆದರೂ, ನಗರದ ಬಹುತೇಕ ಭಾಗಗಳಲ್ಲಿ ಕದ್ದು ಮುಚ್ಚಿ ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಸೆ.1ರಿಂದ ಇದುವರೆಗೂ 15 ದಾಳಿ ನಡೆಸಲಾಗಿದೆ. ಸುಮಾರು 3 ಕ್ವಿಂಟಲ್ ಪ್ಲಾಸ್ಟಿಕ್‌ ವಶಕ್ಕೆ ಪಡೆಯಲಾಗಿದೆ.

ದೀಪಾಳಿಗೂ ಪ್ಲಾಸ್ಟಿಕ್‌ ರಂಗು!: ದೀಪಾವಳಿಗೆ ನಗರದಲ್ಲಿ ಸಿದ್ಧತೆ ಜೋರಾಗಿ ನಡೆದಿದೆ. ಬಗೆಬಗೆಯ ನಕ್ಷತ್ರ ಬುಟ್ಟಿಗಳು, ತರಹೇವಾರಿ ಹಾರ ತುರಾಯಿಗಳು, ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಗೆ ಲಗ್ಗ ಇಟ್ಟಿವೆ. ಅವುಗಳಲ್ಲಿ ಬಹುತೇಕ ಪ್ಲಾಸ್ಟಿಕ್‌ ಸಾಮಗ್ರಿಗಳೇ ಇವೆ. ಬೀದಿಬೀದಿಗಳಲ್ಲಿ ರಾಶಿ ಹಾಕಿಕೊಂಡು ಅವುಗಳನ್ನು ಮಾರಾಟ ಮಾಡಲಾಗುತ್ತಿದೆ.

‘ಮೊದಲು ದಾಳಿ ಆರಂಭಿಸಿದಾಗ ಸಾಕಷ್ಟು ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ವಾದ ಮಾಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಜನರೇ ಸ್ವಯಂ ಇಚ್ಚೆಯಿಂದ ಪ್ಲಾಸ್ಟಿಕ್‌ ಬಳಕೆ ಬೇಡ ಎನ್ನುತ್ತಿದ್ದಾರೆ. ಅಂಗಡಿಗಳಲ್ಲೂ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದುವರೆಗೂ ಎಚ್ಚರಿಕೆ ನೀಡಿದ್ದೇವೆ. ಬಳಕೆ ಮಾಡದಂತೆ ಮನವಿ ಮಾಡಿದ್ದೇವೆ. ಮತ್ತೆ ಪರಿಶೀಲನೆಗೆ ತೆರಳಿದಾಗ ಪ್ಲಾಸ್ಟಿಕ್‌ ಕಂಡು ಬಂದರೆ ಕಾನೂನು ಕ್ರ ಜರುಗಿಸಲಾಗುವುದು. ದಂಡ ವಸೂಲಿ ಮಾಡಲಾಗುವುದು’ ಎನ್ನುತ್ತಾರೆ ನಗರ ಪಾಲಿಕೆ ಪರಿಸರ ಎಂಜಿನಿಯರ್ ರಾಘವೇಂದ್ರ. 

**
ಅಂತಿಮ ಎಚ್ಚರಿಕೆ
ದಾಳಿವೇಳೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಕ್ಕ ಸಾಮಗ್ರಿ ವಶಕ್ಕೆ ಪಡೆಯಲಾಗುತ್ತಿದೆ. ಮತ್ತೆ ಬಳಸಿದರೆ ದಂಡ ವಿಧಿಸಲಾಗುವುದು. ಪ್ರಕರಣ ದಾಖಲಿಸಲಾಗುವುದು.
-ರಾಘವೇಂದ್ರ, ಪರಿಸರ ಎಂಜಿನಿಯರ್, ನಗರ ಪಾಲಿಕೆ.

**
 ವೆಚ್ಚ ಅಧಿಕ 
ಪ್ಲಾಸ್ಟಿಕ್‌ ಕವರ್‌ಗಳು ಕಡಿಮೆ ದರದಲ್ಲಿ ಸಿಗುತ್ತಿದ್ದವು. ಬಟ್ಟೆ ಬ್ಯಾಗ್‌ಗಳಿಗೆ ಕನಿಷ್ಠ ₹15 ವೆಚ್ಚವಾಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಅದೇ ದೊಡ್ಡ ಹೊರೆ. ಕಡಿಮೆ ಬೆಲೆಯ ಕಾಗದ, ಬಟ್ಟೆ ಬ್ಯಾಗ್‌ಗಳು ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
–ಅಫ್ಸಾಲ್, ಮಾಲೀಕರು, ಗ್ಯಾಲಾಕ್ಷಿ ಬ್ಯಾಗ್ಸ್‌, ನೆಹರು ರಸ್ತೆ.

**
ಎಲ್ಲ ರೀತಿಯ ಪ್ಲಾಸ್ಟಿಕ್‌ ನಿಷೇಧಿಸಬೇಕು
ನಗರದಲ್ಲಿ ಬೀದಿ ಹಸುಗಳು ಸೇರಿ ಸಾಕಷ್ಟು ಪ್ರಾಣಿಗಳು ಪ್ಲಾಸ್ಟಿಕ್‌ ಕಸ ತಿಂದು ಮೃತಪಟ್ಟಿವೆ. ಜನರ ಆರೋಗ್ಯಕ್ಕೂ ಇದು ಮಾರಕ. ಪ್ಲಾಸ್ಟಿಕ್‌ ನಿಷೇಧ ಇನ್ನಷ್ಟು ಬಿಗಿಯಾಗಬೇಕು. ಎಲ್ಲ ರೀತಿಯ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಬೇಕು.
–ಪ್ರೇಮಾ, ಸಮಾಜ ಸೇವಕಿ.

ಪ್ರತಿಕ್ರಿಯಿಸಿ (+)