ಮಂಗಳವಾರ, ಆಗಸ್ಟ್ 20, 2019
27 °C
ದೇವನ ಪ್ರೀತಿಸುವ ಕಾಯಕದಲ್ಲಿ ನಿರತ

ದೇವನ ಪ್ರೀತಿಸುವ ಕಾಯಕದಲ್ಲಿ ನಿರತ ವೀರಭದ್ರೇಶ್ವರ ಭಜನಾ ತಂಡ

Published:
Updated:
Prajavani

ತಾಂಬಾ: ಕೆಲವು ಸಂಘ, ಸಂಸ್ಥೆಗಳು ಹಾಗೂ ಜನರು ತಾವು ಮಾಡಿದ ಕಾರ್ಯ ಇತರರಿಗೆ ತಿಳಿಯಬಾರದು ಎಂದು ಎಲೆ ಮರೆಯ ಕಾಯಿಗಳಂತೆ ಶ್ರಮಿಸಿ, ಸಮಾಜಕ್ಕೆ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ. ಅಂತಹ ಸಂಘಗಳ ಸಾಲಿನಲ್ಲಿ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ವೀರಭದ್ರೇಶ್ವರ ಭಜನಾ ಕಲಾ ತಂಡವೂ ಒಂದು.

ನಮ್ಮ ದೇಶದಲ್ಲಿ ಭಕ್ತಿ ಚಳವಳಿಯ ಮೂಲಕ ಭಜನೆ ಕೀರ್ತನೆಗಳು ಹುಟ್ಟಿಕೊಂಡವು. ಇದರ ಮೂಲ ಉದ್ದೇಶ ಭಕ್ತಿ ಪೂರ್ವಕವಾಗಿ ದೇವರನ್ನು ಆರಾಧಿಸುವುದಾಗಿತ್ತು. ‘ಭಜನೆ’ ಎಂಬುದು ಸಂಸ್ಕೃತ ಪದವಾಗಿದ್ದು ಇದರರ್ಥ ಹಂಚು, ಸೇವೆ, ಪ್ರೀತಿಸು ಎಂಬುದಾಗಿದೆ. ಹಿಂದೂ ಭಕ್ತಿ ಸಂಪ್ರದಾಯದಲ್ಲಿ ಭಜನೆ ಎಂಬುದು ತನ್ನದೇಯಾದ ಹಿನ್ನೆಲೆಯನ್ನು ಹೊಂದಿದೆ.

ವೀರಭದ್ರೇಶ್ವರ ಭಜನಾ ಕಲಾ ತಂಡವು, ಮೈಸೂರಿನಲ್ಲಿ 2009ರಲ್ಲಿ ನಡೆದ ‘ಮೈಸೂರು ದಸರಾ ಉತ್ಸವ’, 2009ರಲ್ಲಿ ಹಲಸಂಗಿ ಹಾಗೂ ಗೋಳಸಾರದಲ್ಲಿ ನಡೆದ ‘ಗಡಿನಾಡ ಉತ್ಸವ’, 2011ರಲ್ಲಿ ಬೆಳಗಾವಿಯಲ್ಲಿ ನಡೆದ ‘ವಿಶ್ವ ಕನ್ನಡ ಸಮ್ಮೇಳನ’, ಗದಗನಲ್ಲಿ ನಡೆದ 76ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’, 2013ರಲ್ಲಿ ವಿಜಯಪುರದಲ್ಲಿ ನಡೆದ 79ನೇ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’, ವಿಜಯಪುರದಲ್ಲಿ 2014ರಲ್ಲಿ ನಡೆದ ಅಖಿಲ ಭಾರತ 12ನೇ ‘ಶರಣ ಸಾಹಿತ್ಯ ಸಮ್ಮೇಳನ’, 2016ರಲ್ಲಿ ದಾವಣಗೆರೆಯಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ನಡೆದ ರಾಜ್ಯ ಮಟ್ಟದ ‘ಜಾನಪದ ಸುಗ್ಗಿ’ ಕಾರ್ಯಕ್ರಮ ಸೇರಿದಂತೆ ನೂರಾರು ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಈ ತಂಡಕ್ಕಿದೆ.

ಈ ತಂಡದಲ್ಲಿ ಸಮಾಜಕ್ಕಾಗಿ ದುಡಿಯಬೇಕು ಎಂಬ ಮನೋಭಾವವುಳ್ಳ ಚಿದಾನಂದ ಗೌಡಗಾವಿ, ರೇವಪ್ಪ ಹೊರ್ತಿ, ಷಣ್ಮುಖಪ್ಪ ದೇವೂರ, ಅಂಬಣ್ಣ ರೇವಶೆಟ್ಟಿ, ಚೆನ್ನಪ್ಪ ಕಂಬಾರ, ಧರ್ಮಣ್ಣ ಭೈರಾಮಡಗಿ, ಮಹಾದೇವ ನಂದಿಕೋಲ, ಪರಸುರಾಮ ಗುಬ್ಬೇವಾಡ, ಸಿದ್ದಪ್ಪ ವಾಲಿಕಾರ, ಗಿರಮಲ್ಲ ಗುಜ್ಜಿ, ಬಸವಾರಾಜ ಮಲಘಾಣ, ರಾಯಗೊಂಡ ಕನಾಳ ಇದ್ದಾರೆ.

ಬಹುತೇಕ ಕಾರ್ಯಕ್ರಮಗಳು ರಾತ್ರಿ ಹೊತ್ತಲ್ಲೇ ಜರುಗುವುದರಿಂದ ಹಗಲು ಹೊಲದಲ್ಲಿ ದುಡಿದು, ರಾತ್ರಿ ಭಜನೆ ಕೀರ್ತನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಧ್ಯಾತ್ಮ, ಪೌರಾಣಿಕ, ತತ್ವಪದ, ಡೊಳ್ಳು ಕುಣಿತಗಳಂತಹ ನಾನಾ ದೇಶಿ ಕಲೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಜನಪರ ಕಾಳಜಿಯೊಂದಿಗೆ ಕಲಾ ಪೋಷಣೆಯನ್ನು ಮಾಡುತ್ತಿರುವ ಇವರ ಕಾರ್ಯಕ್ಕೆ 50ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ.

Post Comments (+)