ಭಾನುವಾರ, ಸೆಪ್ಟೆಂಬರ್ 15, 2019
30 °C
100 ಜನರಿಗೆ ಕೆಲಸ; 24,300 ಗಿಡ ನೆಡುವ ಗುರಿ

ಹಸಿರು ತೋರಣ ಕಟ್ಟಿದ ಅರಣ್ಯಾಧಿಕಾರಿ

Published:
Updated:
Prajavani

ಮುದ್ದೇಬಿಹಾಳ: ಒಬ್ಬ ಅಧಿಕಾರಿ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎಂಬುದಕ್ಕೆ ಮುದ್ದೇಬಿಹಾಳ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ ಮಾದರಿಯಾಗಿ ನಿಲ್ಲುತ್ತಾರೆ.

ಇಂಡಿ ತಾಲ್ಲೂಕು ನೀವರಗಿ ಗ್ರಾಮದ ಸಂತೋಷ 2007ರಲ್ಲಿ ವನಪಾಲಕರಾಗಿ ಅರಣ್ಯ ಇಲಾಖೆ ಸೇರಿದರು. ನಂತರ ತಮ್ಮ ಕೆಲಸದ ಮೂಲಕವೇ ಸಾಧನೆಯ ಮೆಟ್ಟಿಲೇರಿದರು.

ಸಂತೋಷ ಅಜೂರ 2016ರಲ್ಲಿ ಇಲ್ಲಿಗೆ ಬಂದ ವರ್ಷ ನೆಟ್ಟ ಗಿಡಗಳು ಕೇವಲ 600. 2017ರಲ್ಲಿ 26 ಸಾವಿರ, 2018ರಲ್ಲಿ 25 ಸಾವಿರ, 2019ರಲ್ಲಿ 24,300 ಗಿಡ ನೆಡುವ ಗುರಿ ಹೊಂದಿದ್ದು, ಈಗಾಗಲೇ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ಈ ಅಪರೂಪದ ಕೆಲಸಕ್ಕೆ ಸಂತೋಷ ಅವರು ಎಲ್ಲರ ಸಹಾಯ, ಸಹಕಾರ ಪಡೆದಿದ್ದಾರೆ. ಅವರು ಮಾಡಿದ ಕೆಲಸದಿಂದ ಇಡೀ ತಾಲ್ಲೂಕು ಹಸಿರುಮಯ ಆಗುವಂತೆ ಮಾಡಿದೆ.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಸ್ಮಶಾನ ಭೂಮಿ, ಪೊಲೀಸ್ ಠಾಣೆ, ಎಂಜಿವಿಸಿ ಕಾಲೇಜು, ಬಿದರಕುಂದಿ ಮದರಸಾ, ದೇವರ ಹುಲಗಬಾಳದ 30 ಎಕರೆ ಪ್ರದೇಶ, ಬಳಗಾನೂರ ರಸ್ತೆ, ಢವಳಗಿ, ರೂಢಗಿ ಶಾಲೆ, ನೆರಬೆಂಚಿ, ಘಾಳಪೂಜಿ, ಆಲೂರ ನಾಲತವಾಡ ರಸ್ತೆ, ಹಿರೇಮುರಾಳ ಹುನಕುಂಟಿ ರಸ್ತೆ ಹೀಗೆ ಅವರ ತಂಡ ನೆಟ್ಟಿರುವ ಗಿಡಗಳ ಸಂಖ್ಯೆ ಸಾವಿರ ಸಾವಿರ.

ಮಲಗಲದಿನ್ನಿಯಲ್ಲಿ ರೈತರು ಅತಿಕ್ರಮಿಸಿದ್ದ 15 ಎಕರೆ ಭೂಮಿ ಮರು ವಶಪಡಿಸಿಕೊಂಡು ಅಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಕೇಸಾಪೂರ ಕ್ರಾಸ್ ಬಳಿ ಇದ್ದ ಇಲಾಖೆಯ 10 ಎಕರೆ ಭೂಮಿಯಲ್ಲಿ ನರ್ಸರಿ ಮಾಡಿ, ಅಲ್ಲಿ ಸುಂದರ ಉದ್ಯಾನ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಪಿಕನಿಕ್ ಸ್ಥಳವನ್ನಾಗಿ ಮಾಡಿದ್ದಾರೆ.

ಇವರ ಸಾಧನೆ ಕಂಡು ಸರ್ಕಾರದ ಪ್ರಶಸ್ತಿಗಳಲ್ಲದೇ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ತಾಲ್ಲೂಕಿನಾದ್ಯಂತ ಗಿಡಗಳನ್ನು ನೆಟ್ಟಿದ್ದಾರೆ. ಅವುಗಳ ನಿರ್ವಹಣೆ, ನೀರುಣಿಸುವ ಕೆಲಸ ಮಾಡಿ ನೂರು ಜನರಿಗೆ ಕೆಲಸ ನೀಡಿದ್ದಾರೆ.

Post Comments (+)