ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು, ಸೈನಾಗೆ ಪ್ರಶಸ್ತಿ ಕನಸು

ಇಂದಿನಿಂದ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ವಿಶ್ವಾಸದಲ್ಲಿ ಶ್ರೀಕಾಂತ್‌
Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ : ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಅವರು ಬುಧವಾರದಿಂದ ನಡೆಯುವ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕದ ಪ್ರಕಾಶ್‌ ಪಡುಕೋಣೆ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದರು. 1980ರಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. 2001ರಲ್ಲಿ ಪುಲ್ಲೇಲಾ ಗೋಪಿಚಂದ್ ಚಿನ್ನ ಗೆದ್ದ ಸಾಧನೆ ಮಾಡಿದ್ದರು.

ಆ ನಂತರ ಭಾರತದ ಯಾವ ಸ್ಪರ್ಧಿಗಳೂ  ಪ್ರಶಸ್ತಿ ಗೆದ್ದಿಲ್ಲ. 17 ವರ್ಷಗಳ ಈ ಕೊರಗು ಈ ಬಾರಿ ನೀಗುವ ನಿರೀಕ್ಷೆ ಇದೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದ ಸಿಂಧು, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪಾವೀ ಚೊಚುವಾಂಗ್‌ ವಿರುದ್ಧ ಆಡಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಬಿಯೆವೆನ್‌ ಜಾಂಗ್‌ ಸವಾಲು ಎದುರಾಗಲಿದೆ.

2017ರಲ್ಲಿ ಸಿಂಧು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಇದು ಆಲ್‌ ಇಂಗ್ಲೆಂಡ್‌ನಲ್ಲಿ ಅವರ ಶ್ರೇಷ್ಠ ಸಾಧನೆ ಎನಿಸಿದೆ. ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು, ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌, ಇಂಡಿಯಾ ಮತ್ತು ಕೊರಿಯಾ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದರು. ಅಮೋಘ ಲಯದಲ್ಲಿರುವ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಸೈನಾಗೆ ಮೊದಲ ಸುತ್ತಿನಲ್ಲಿ ಕಠಿಣ ಪೈಪೋಟಿ ಎದುರಾಗಿದೆ. ಭಾರತದ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತೈ ಜು ಯಿಂಗ್‌ ವಿರುದ್ಧ ಆಡಬೇಕಿದೆ.

ಚೀನಾ ತೈಪೆಯ ಯಿಂಗ್‌ ಹೋದ ವರ್ಷ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಸೈನಾ ಎದುರು ಅವರು 9–5ರ ಗೆಲುವಿನ ದಾಖಲೆ ಹೊಂದಿದ್ದಾರೆ.

ಸೈನಾ, ಆಲ್‌ ಇಂಗ್ಲೆಂಡ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಹಿರಿಮೆ ಹೊಂದಿದ್ದಾರೆ. 2015ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಾಧನೆಯೂ ಅವರ ಹೆಸರಿನಲ್ಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಭಾರತದ ಭರವಸೆಯಾಗಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಹೊಂದಿರುವ ಶ್ರೀಕಾಂತ್‌, 2017ರಲ್ಲಿ ನಾಲ್ಕು ಸೂಪರ್‌ ಸೀರಿಸ್‌ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದರು. ಹೋದ ವರ್ಷ ಅವರು ಮೊದಲ ಸುತ್ತಿನಲ್ಲೇ ಸೋತಿದ್ದರು. ಅವರು ಈ ಬಾರಿ ಪದಕ ಗೆದ್ದು ಹಿಂದಿನ ನಿರಾಸೆ ಮರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಸಿಂಗಪುರ ಓಪನ್‌ನಲ್ಲಿ ಚಾಂಪಿ ಯನ್‌ ಆಗಿದ್ದ ಬಿ. ಸಾಯಿಪ್ರಣೀತ್‌, ವಿಶ್ವ ಕ್ರಮಾಂಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಎಚ್‌.ಎಸ್‌.ಪ್ರಣಯ್‌ ಅವರೂ ಪದಕ ಜಯಿಸುವ ಛಲದಲ್ಲಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಪ್ರಣೀತ್‌, ಕೊರಿಯಾದ ಸನ್‌ ವಾನ್‌ ಹೊ ವಿರುದ್ಧ ಆಡಲಿದ್ದಾರೆ. ಪ್ರಣಯ್‌ಗೆ ಚೀನಾ ತೈಪೆಯ ಎಂಟನೇ ಶ್ರೇಯಾಂಕಿತ ಆಟಗಾರ ಚೌ ತಿಯೆನ್‌ ಚೆನ್‌ ಸವಾಲು ಎದುರಾಗಲಿದೆ.

ಪುರುಷರ ಡಬಲ್ಸ್‌, ಮಹಿಳೆಯರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಕಣಕ್ಕಿಳಿಯುತ್ತಿರುವ ಭಾರತದ ಸ್ಪರ್ಧಿಗಳೂ ಪದಕದ ಕನಸು ಹೊತ್ತಿದ್ದಾರೆ.
**
ತೈ ಜು ವಿಶ್ವದ ಶ್ರೇಷ್ಠ ಆಟಗಾರ್ತಿ. ಹೋದ ವರ್ಷ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರನ್ನು ಮಣಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ.
-ಸೈನಾ ನೆಹ್ವಾಲ್‌, ಭಾರತದ ಆಟಗಾರ್ತಿ
**
ಹಿಂದಿನ ಆರು ವಾರಗಳಿಂದ ಕಠಿಣ ತರಬೇತಿ ನಡೆಸಿದ್ದೇನೆ. ಹೀಗಾಗಿ ಈ ಬಾರಿ ಪದಕ ಗೆಲ್ಲುವ ವಿಶ್ವಾಸ ಮೂಡಿದೆ.
- ಪಿ.ವಿ.ಸಿಂಧು, ಭಾರತದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT