ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರುಣ್ ಸುಧೀರ್ ಪರಿಸರ ಪ್ರೀತಿ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಸಿನಿಮಾ ಮಂದಿಗೂ ಸಾಮಾಜಿಕ ಕಳಕಳಿಗೂ, ಪರಿಸರ ಪ್ರೀತಿಗೂ ಅಷ್ಟಕಷ್ಟೇ ಅನ್ನೋದು ಬಹುತೇಕರ ಆರೋಪ. ಆದರೆ, ಚಂದನವನದಲ್ಲಿ ಇದಕ್ಕೆ ಅಪವಾದ ಎನ್ನುವಂತೆ ಹಲವರಿದ್ದಾರೆ. ರಾಧಿಕಾ ಪಂಡಿತ್, ಯಶ್, ಚೇತನ್, ಸಂಯುಕ್ತಾ ಹೊರನಾಡು ಮೊದಲಾದ ತಾರೆಯರ ನಡುವೆ ಭಿನ್ನವಾಗಿ ನಿಲ್ಲುವಂಥವರು ಯುವ ನಿರ್ದೇಶಕ ತರುಣ್ ಸುಧೀರ್.

ತರುಣ್ ತಮ್ಮ ಸೆಟ್‌ನಲ್ಲಿ ಪ್ಲಾಸ್ಟಿಕ್ ಟೀ ಕಪ್‌ಗಳ ಬದಲು ಪೇಪರ್ ಕಪ್‌ಗಳನ್ನು ಬಳಸುವುದಕ್ಕೆ ಆದ್ಯತೆ ನೀಡುತ್ತಾರೆ. ‘ಟೀ, ಕಾಫಿ ಕುಡಿದ ನಂತರ ಬಹುತೇಕರು ಸೋಮಾರಿತನದಿಂದಲೋ ಅಥವಾ ಅವುಗಳನ್ನು ಎಲ್ಲಿ ಬಿಸಾಡಬೇಕು ಎನ್ನುವ ಗೊಂದಲದಲ್ಲೋ ಕಪ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಆದರೆ, ಅದಕ್ಕೆ ಪರಿಹಾರವಾಗಿ ನಾನು ನಮ್ಮ ಸೆಟ್‌ನ ಹುಡುಗರಿಗೆ ಒಂದು ಪೇಪರ್ ಬ್ಯಾಗ್ ಇಲ್ಲವೇ ಪೇಪರ್ ಬಾಕ್ಸ್‌ನಲ್ಲಿ ಟೀ ಕಪ್‌ಗಳನ್ನು ಸಂಗ್ರಹಿಸಲು ಸೂಚಿಸುತ್ತೇನೆ’ ಎನ್ನುತ್ತಾರೆ ತರುಣ್.

‘ಟೀ–ಕಾಫಿ ಕೊಟ್ಟ ಹತ್ತು ನಿಮಿಷಗಳ ಒಳಗೆ ಈ ಹುಡುಗರು ಕಪ್ ಕೊಟ್ಟವರ ಮುಂದೆ ಈ ಬ್ಯಾಗ್‌ಗಳನ್ನು ಹಿಡಿಯುತ್ತಾರೆ. ಆಗ ಆ ಕಪ್‌ಗಳನ್ನು ಅದರಲ್ಲಿ ಸಂಗ್ರಹಿಸ ಲಾಗುತ್ತದೆ. ಇದರಿಂದ ಕಪ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ತಾಪತ್ರಯ ತಪ್ಪುತ್ತದೆ. ಪರಿಸರವೂ ಸ್ವಚ್ಛವಾಗಿರುತ್ತದೆ. ಇನ್ನು ಸೆಟ್‌ನಲ್ಲಿ ತಿಂಡಿ ಮತ್ತು ಊಟಕ್ಕೆ ಸ್ಟೀಲ್ ತಟ್ಟೆಗಳನ್ನು ಬಳಸುತ್ತೇವೆ. ನೀರು ಕುಡಿಯಲು ಸ್ಟೀಲ್ ಲೋಟ ಹಾಗೂ ಕೆಲವೊಮ್ಮೆ ನೀರಿನ ಬಾಟಲಿ  ಬಳಸುತ್ತೇವೆ. ಹಾಗೆ ಬಳಸಿದ ಬಾಟಲಿಗಳನ್ನು ಪುನರ್ ಬಳಕೆ ಮಾಡುತ್ತೇವೆ’ ಎನ್ನುವ ವಿವರಣೆ ಅವರದ್ದು.

‘ದಟ್ಟ ಕಾಡಿನಲ್ಲೋ ಅಥವಾ ಹೊರಾಂಗಣ ಸ್ಥಳಗಳಲ್ಲಿ ಚಿತ್ರೀಕರಣ ದಲ್ಲಿ ತೊಡಗಿ ಕೊಂಡಾಗ ಪರಿಸರ ಸ್ವಚ್ಛತೆಯ ಬಗ್ಗೆ ಪ್ರಜ್ಞಾಪೂರ್ವಕವಾಗಿ ನಡೆದು ಕೊಳ್ಳುತ್ತೇನೆ. ನಮ್ಮ ತಂಡವೂ ಇದನ್ನು ಅನುಸರಿಸುತ್ತದೆ. ಈ ಅಭ್ಯಾಸ ನನಗೆ ಮೊದಲಿನಿಂದಲೂ ಇದೆ.

ಬಬ್ಬಲ್ ಗಮ್‌ ಅಥವಾ ಚಾಕೊಲೇಟ್ ತಿಂದಾಗಲೂ ನಾನು ಕಿಟಕಿಯಾಚೆಗೆ ಎಲ್ಲೆಂದರಲ್ಲಿ ಬಿಸಾಡುವುದಿಲ್ಲ. ಕಾರಿನಲ್ಲಿ ಸಣ್ಣ ಪೇಪರ್ ಬ್ಯಾಗ್‌ನಲ್ಲಿ ಅದನ್ನು ಹಾಕಿಡುತ್ತೇನೆ. ನನ್ನ ಜತೆಯಲ್ಲಿರುವವರಿಗೂ ಇದನ್ನು ಹೇಳುತ್ತೇನೆ. ಮರುದಿನ ಕಾರ್ ಅನ್ನು ಸ್ವಚ್ಚಗೊಳಿಸುವವರು ಅದನ್ನು ಕಸದಬುಡ್ಡಿಗೆ ಹಾಕುತ್ತಾರೆ’ ಎನ್ನುತ್ತಾರೆ ಅವರು.

ವಿದೇಶದಲ್ಲಿ ಚಿತ್ರೀಕರಣಕ್ಕೆ ಹೋದಾಗ ಅಲ್ಲಿನ ನಿಯಮಗಳನ್ನು ತುಂಬಾ ಎಚ್ಚರಿಕೆಯಿಂದ ಅನುಸರಿಸುತ್ತೇವೆ. ಆದರೆ, ನಮ್ಮ ದೇಶಕ್ಕೆ ಬಂದಾಗ ಅದೆಲ್ಲವನ್ನೂ ಮರೆತು ಹೇಗೆ ಬೇಕೋ ಹಾಗೇ ವರ್ತಿಸುತ್ತೇವೆ. ಇದು ತಪ್ಪು. ಮನೆಯಲ್ಲಿ ನೀರು ಕುಡಿಯಲು ತಾಮ್ರದ ನೀರಿನ ಬಾಟಲಿಗಳನ್ನೇ ಬಳಸುತ್ತೇನೆ. ಮನೆ ಮಂದಿಯೆಲ್ಲಾ ಅದನ್ನೇ ಬಳಸುತ್ತೇವೆ. ನೀರು ಕುಡಿಯಲು ಸ್ಟೀಲ್ ಲೋಟ ಉಪಯೋಗಿಸುತ್ತೇವೆ. ಪ್ಲಾಸ್ಟಿಕ್ ಅನ್ನು ಆದಷ್ಟೂ ಕಡಿಮೆ ಬಳಸುತ್ತೇನೆ’ ಎಂದು ತಮ್ಮ ಪರಿಸರ ಪ್ರೀತಿ ಮೆರೆಯುತ್ತಾರ ತರುಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT